
ಗೋಂಡಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ಅನುಮಾನದ ಭೂತಕ್ಕೆ ಅಮಾಯಕ ಮಹಿಳೆಯೊಬ್ಬಳು ಬಲಿಯಾಗಿದ್ದಾರೆ. ಪತ್ನಿಯ ಮೇಲೆ ಅನೈತಿಕ ಸಂಬಂಧದ ಶಂಕೆ ಹೊಂದಿದ್ದ ವ್ಯಕ್ತಿಯೊಬ್ಬ, ರಾತ್ರಿ ಮಲಗಿದ್ದ ವೇಳೆ ಮಕ್ಕಳ ಸಮ್ಮುಖದಲ್ಲೇ ಪತ್ನಿಯ ಮೇಲೆ ಕೋಡಲಿಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೌಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟಿಯಾ ಮದಾರಾ ಗ್ರಾಮದಲ್ಲಿ ನವೆಂಬರ್ 20-21 ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮನೋಜ್ ಕುಮಾರ್ ಶುಕ್ಲಾ ಎಂಬಾತ ತನ್ನ ಪತ್ನಿ ಸುಮನ್ ಶುಕ್ಲಾ (34) ಅವರನ್ನು ಹತ್ಯೆ ಮಾಡಿರುವ ಆರೋಪಿ. ಕೃತ್ಯದ ಸಮಯದಲ್ಲಿ ದಂಪತಿಯ 14 ವರ್ಷದ ಮಗ ಕಿಶನ್ ಹಾಗೂ 4 ವರ್ಷದ ಮಗಳು ಶಗುನ್ ತಾಯಿಯ ಪಕ್ಕದಲ್ಲೇ ಮಲಗಿದ್ದರು.
ಕಣ್ಣೆದುರೇ ನಡೆದ ಭೀಕರ ಕೃತ್ಯ: ತಂದೆ ತನ್ನ ತಾಯಿಯ ಮೇಲೆ ಕೋಡಲಿಯಿಂದ ಹಲ್ಲೆ ನಡೆಸಿ ಪರಾರಿಯಾಗುವುದನ್ನು 14 ವರ್ಷದ ಮಗ ಕಣ್ಣಾರೆ ಕಂಡಿದ್ದಾನೆ. ತಕ್ಷಣವೇ ಮಗ ತನ್ನ ಅಮ್ಮನಿಗೆ ವಿಷಯ ತಿಳಿಸಲು ಅಮ್ಮನ ತಾಯಿಗೆ (ಅಜ್ಜಿ) ಫೋನ್ ಮಾಡಿ ಕಣ್ಣೀರಿಟ್ಟಿದ್ದಾನೆ.
ನಾಲ್ಕು ವರ್ಷಗಳ ಹಿಂದಿನ ಶಂಕೆ: ಸುಮಾರು ನಾಲ್ಕು ವರ್ಷಗಳ ಹಿಂದೆ ಪಾಣಿಪತ್ಗೆ ಹೋಗಿದ್ದಾಗ ಪತ್ನಿ ಯಾರೊಂಬರೊಡನೆ ಮಾತನಾಡುತ್ತಿದ್ದರು ಎಂಬ ಸಣ್ಣ ಶಂಕೆಯನ್ನು ಮನೋಜ್ ಮನಸ್ಸಿನಲ್ಲಿಟ್ಟುಕೊಂಡಿದ್ದನು. ಇದೇ ವಿಚಾರಕ್ಕೆ ಆಗಾಗ ಜಗಳವಾಡಿ, ಕೊನೆಗೆ ಪತ್ನಿಯ ಪ್ರಾಣ ತೆಗೆದಿದ್ದಾನೆ. ಅಲ್ಲದೆ, ಆರೋಪಿಗೆ ಮದ್ಯಪಾನದ ಚಟವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿ ಮತ್ತು ಅತ್ತೆ ವಿರುದ್ಧ ದೂರು: ಮೃತ ಸುಮನ್ ಅವರ ತಾಯಿ ಸಿಕಾವತಿ ತಿವಾರಿ ಅವರು ನೀಡಿದ ದೂರಿನ ಮೇರೆಗೆ, ಆರೋಪಿ ಮನೋಜ್ ಹಾಗೂ ಆತನ ತಾಯಿಯ ವಿರುದ್ಧ ಕೌಡಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಎರಡು ವರ್ಷಗಳಿಂದ ವರದಕ್ಷಿಣೆ ಮತ್ತು ಇತರ ಕಾರಣಗಳಿಗಾಗಿ ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿ ಬಂಧನ ಹಾಗೂ ಆಯುಧ ವಶ: ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಮನೋಜ್ನನ್ನು ಬಂಧಿಸಿದ್ದು, ಕೊಲೆಗೆ ಬಳಸಿದ ಕೊಡಲಿಯನ್ನು ವಶಪಡಿಸಿಕೊಂಡಿದ್ದಾರೆ. ಮಕ್ಕಳು ಆಘಾತದಿಂದ ಹೊರಬರಲು ಕೌನ್ಸೆಲಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.




