
ನಾಗರಕೋವಿಲ್: ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋವಿಲ್ ರೈಲ್ವೆ ಯಾರ್ಡ್ ನಲ್ಲಿ ನಿಲ್ಲಿಸಿದ್ದ ಬಳಕೆಯಲ್ಲಿಲ್ಲದ ರೈಲು ಬೋಗಿಯೊಂದರಲ್ಲಿ 54 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಳೆದು ಕೊಲೆ ಮಾಡಿರುವ ಘಟನೆ ತೀವ್ರ ಆಘಾತ ಸೃಷ್ಟಿಸಿದೆ.
ನವೆಂಬರ್ 13ರಂದು ಮಧ್ಯರಾತ್ರಿ ಈ ಕೃತ್ಯ ನಡೆದಿದ್ದು, ಮೃತರ ಕೈಯಲ್ಲಿದ್ದ ಹಾಲ್ಮಾರ್ಕ್ ಹೊಂದಿದ್ದ ವಿಶಿಷ್ಟ ಚಿನ್ನದ ಉಂಗುರದ ಮೂಲಕ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ಮಹಿಳೆಯ ಗುರುತು ಪತ್ತೆ ಹಚ್ಚಲು ಯಾವುದೇ ಸುಳಿವು ಸಿಗದ ಕಾರಣ ಪೊಲೀಸರು ಆಕೆಯ ಕೈಯಲ್ಲಿದ್ದ ಹಾವಿನ ವಿನ್ಯಾಸದ ಚಿನ್ನದ ಉಂಗುರವನ್ನು ಆಧರಿಸಿ ತನಿಖೆ ಆರಂಭಿಸಿದ್ದರು. ಉಂಗುರದ ಹಾಲ್ಮಾರ್ಕ್ ಆಧಾರದ ಮೇಲೆ ಗುಜರಾತ್ ಹಾಗೂ ಛತ್ತೀಸ್ಗಢದ ರಾಯ್ಪುರ ಮಾರಾಟಗಾರರ ಮೂಲಕ ಮಧ್ಯಪ್ರದೇಶದ ವಿಳಾಸ ಹಾಗೂ ಪಾನ್ ಕಾರ್ಡ್ ವಿವರಗಳನ್ನು ಪಡೆದು ಕುಟುಂಬದವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಉಂಗುರದಿಂದ ಸಿಕ್ಕ ಸುಳಿವು: ಕಳೆದು ಮೂರು ತಿಂಗಳಿಂದ ನಾಪತ್ತೆಯಾಗಿದ್ದ ಮಹಿಳೆಯ ಗುರುತನ್ನು ಆಕೆಯ ಉಂಗುರ ಮತ್ತು ಪ್ಯಾನ್ ಕಾರ್ಡ್ ದಾಖಲೆಗಳ ಮೂಲಕ ಪೊಲೀಸರು ಪತ್ತೆ ಹಚ್ಚಿದ್ದು, ಕುಟುಂಬದವರು ಕನ್ಯಾಕುಮಾರಿಗೆ ಧಾವಿಸುತ್ತಿದ್ದಾರೆ.
ಆರು ಗಂಟೆಗಳಲ್ಲಿ ಆರೋಪಿ ಬಂಧನ: ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ರೈಲ್ವೆ ಪೊಲೀಸರು, ಕೇವಲ ಆರು ಗಂಟೆಗಳ ಒಳಗೆ ಭಿಕ್ಷುಕನೊಬ್ಬನನ್ನು ಬಂಧಿಸಿದ್ದಾರೆ. ಆತ ರೈಲು ನಿಲ್ದಾಣದ ಆವರಣದಲ್ಲೇ ತಿರುಗಾಡುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆಯ ವಿವರ: ಬಳಕೆಯಲ್ಲಿಲ್ಲದ ಬೋಗಿಗೆ ಮಹಿಳೆಯನ್ನು ಕರೆದೊಯ್ದು ಬಲವಂತವಾಗಿ ಅತ್ಯಾಚಾರವೆಳೆದು, ಕೈಗಳಿಂದ ಹೊಡೆದು ಹಾಗೂ ಎದೆಗೆ ಒದ್ದು ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ರಕ್ತಸಿಕ್ತ ಅಂಗಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಇಲಾಖೆಯ ತ್ವರಿತ ಕಾರ್ಯಾಚರಣೆ ಹಾಗೂ ರೈಲ್ವೆ ಎಸ್ಪಿ ಆದರ್ಶ್ ಪಚೇರಾ ಅವರ ತಂಡದ ತನಿಖೆಯನ್ನು ತಮಿಳುನಾಡು ರೈಲ್ವೆ ಡಿಜಿಪಿ ಕೆ. ವಣ್ಣಿಯಾ ಪೆರುಮಾಳ್ ಶ್ಲಾಘಿಸಿದ್ದಾರೆ.




