
ಬೆಂಗಳೂರು: ವಿದೇಶಿ ನೆಲದಲ್ಲಿ ಭಾರತದ ಘನತೆ, ಗೌರವ ಹಾಗೂ ಜಾಗತಿಕ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡುವುದೇ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ರಾಜಕೀಯ ಅಜೆಂಡಾವಾಗಿ ಮಾರ್ಪಟ್ಟಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಕಿಡಿಕಾರಿದ್ದಾರೆ.
ಚಿಕಾಗೋದಲ್ಲಿ ನಡೆದ ಸಂವಾದದಲ್ಲಿ ಪಾಕಿಸ್ತಾನವನ್ನು ಅಮೆರಿಕ-ಇರಾನ್ ಮಾತುಕತೆಗಳ ಮಧ್ಯಸ್ಥಿಕೆಗಾರನಾಗಿ ಹೊಗಳಿ, ಭಾರತವನ್ನು ಜಾಗತಿಕ ರಾಜಕೀಯದಲ್ಲಿ ‘ಸೈಡ್ ಪ್ಲೇಯರ್’ ಎಂದು ಬಿಂಬಿಸಿರುವ ರಾಹುಲ್ ಗಾಂಧಿಯವರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯುತವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 12 ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್ ಪಕ್ಷ, ಜನರ ವಿಶ್ವಾಸವನ್ನು ಮರಳಿ ಗಳಿಸುವ ಬದಲು ದೇಶದ ಸಾಧನೆಗಳನ್ನು ಪ್ರಶ್ನಿಸುವುದು ಮತ್ತು ರಾಷ್ಟ್ರದ ರಾಜಕೀಯ ವಾತಾವರಣವನ್ನು ಅಯೋಮಯಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಅಶೋಕ್ ಟೀಕಿಸಿದ್ದಾರೆ. ದೇಶದ ಹಿತಾಸಕ್ತಿಗಿಂತ ರಾಜಕೀಯ ಹತಾಶೆ ಮತ್ತು ಅಧಿಕಾರದ ಹಂಬಲವೇ ಮೇಲು ಎಂಬ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಇಂತಹ ಹೇಳಿಕೆಗಳ ಮೂಲಕ ಮತ್ತೆ ಮತ್ತೆ ಬಯಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಪಾಕಿಸ್ತಾನದ ವೈಭವೀಕರಣ ಖಂಡನೆ: ದೇಶದ ರಾಜತಾಂತ್ರಿಕ ಸಾಧನೆಗಳನ್ನು ತೆಗಳುತ್ತಾ, ನೆರೆಯ ಪಾಕಿಸ್ತಾನದ ಪಾತ್ರವನ್ನು ವಿದೇಶಿ ವೇದಿಕೆಗಳಲ್ಲಿ ವೈಭವೀಕರಿಸುವುದು ಪ್ರತಿಪಕ್ಷ ನಾಯಕನ ಘನತೆಗೆ ತಕ್ಕ ನಡೆ ಅಲ್ಲ ಎಂದು ಆರ್. ಅಶೋಕ್ ಆಕ್ಷೇಪಿಸಿದ್ದಾರೆ.
ಭಾರತದ ಪ್ರತಿಷ್ಠೆಗೆ ಧಕ್ಕೆ: ವಿದೇಶಿ ವೇದಿಕೆಗಳಲ್ಲಿ ಭಾರತದ ಪ್ರಜಾಪ್ರಭುತ್ವ, ಆರ್ಥಿಕ ಪ್ರಗತಿ ಹಾಗೂ ಆಂತರಿಕ ವಿಚಾರಗಳ ಕುರಿತು ಪ್ರಶ್ನಾರ್ಹ ಹೇಳಿಕೆಗಳನ್ನು ನೀಡಿ ದೇಶದ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನವನ್ನು ರಾಹುಲ್ ಗಾಂಧಿ ನಿರಂತರವಾಗಿ ಮಾಡುತ್ತಿದ್ದಾರೆ.
ಜನತೆಯಿಂದ ತಕ್ಕ ಉತ್ತರ: ರಚನಾತ್ಮಕ ವಿರೋಧ ಪಕ್ಷವಾಗಿ ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಕರ್ತವ್ಯವಾಗಿದ್ದು, ದೇಶದ ಜಾಗತಿಕ ಗೌರವವನ್ನು ಕುಗ್ಗಿಸುವ ಇಂತಹ ದೇಶ ವಿರೋಧಿ ನಡೆಗೆ ಮುಂದಿನ ದಿನಗಳಲ್ಲಿ ಜನತೆಯೇ ಸ್ಪಷ್ಟ ಉತ್ತರ ನೀಡಲಿದ್ದಾರೆ.




