
ಬಾಲಿ: ಇಂಡೋನೇಷ್ಯಾದ ಹಿಂದೂ ಬಾಹುಳ್ಯದ ಪ್ರಾಂತ್ಯವಾಗಿರುವ ಬಾಲಿಯಲ್ಲಿ ನಿರ್ಮಿಸಲಾಗಿರುವ 50 ಅಡಿ ಎತ್ತರದ ಬೃಹತ್ ಗಣೇಶ ಪ್ರತಿಮೆಯು ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾಗಿದೆ.
ಕೇವಲ ಧಾಮಿಕ ಮಹತ್ವವಷ್ಟೇ ಅಲ್ಲದೆ, ಇದರ ವಿಶಿಷ್ಟ ಕರಕುಶಲತೆ ಮತ್ತು ನಿರ್ಮಾಣ ಶೈಲಿಗಾಗಿ ಈ ಪ್ರತಿಮೆಯು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಮುಸ್ಲಿಂ ಬಾಹುಳ್ಯದ ರಾಷ್ಟ್ರವಾಗಿರುವ ಇಂಡೋನೇಷ್ಯಾದ ಜಿಯಾನ್ಯಾರ್ ಪ್ರದೇಶದಲ್ಲಿ ಈ ವಿಗ್ರಹವನ್ನು ಅನಾವರಣಗೊಳಿಸಲಾಗಿದೆ.
ಅಲಸ್ ಹರುಮ್ ಬಾಲಿ ಸೃಷ್ಟಿಸಿರುವ ಈ ಬೃಹತ್ ಕಲಾಕೃತಿಯು ಸೈಂಟೆಟಿಕ್ ರಾಟನ್ ಅಥವಾ ಕೃತಕ ರಾಟನ್ ಬಳಸಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ಬೆಂಬಲಿತ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪ್ರತಿಮೆಯು ಸುಮಾರು 15.315 ಮೀಟರ್ ಅಂದರೆ 50 ಅಡಿ 2 ಇಂಚು ಎತ್ತರವಿದೆ. ಜ್ಞಾನ, ಯಶಸ್ಸು, ಅದೃಷ್ಟ ಮತ್ತು ಹೊಸ ಆರಂಭದ ಸಂಕೇತವಾದ ಗಣೇಶನ ಈ ಭವ್ಯ ಮೂರ್ತಿಯು ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಹೊರಹೊಮ್ಮಿದೆ.
ವಿಶ್ವ ದಾಖಲೆಯ ಗಣೇಶ ಪ್ರತಿಮೆ: ಬಾಲಿಯ ಜಿಯಾನ್ಯಾರ್‌ನಲ್ಲಿ ನಿರ್ಮಿಸಲಾಗಿರುವ 15.315 ಮೀಟರ್ (50 ಅಡಿ 2 ಇಂಚು) ಎತ್ತರದ ಗಣೇಶ ಪ್ರತಿಮೆಯು ವಿಶ್ವದ ಅತಿ ಎತ್ತರದ ಕೃತಕ ರಾಟನ್ ರಚನೆ ಎಂದು ಗಿನ್ನೆಸ್ ದಾಖಲೆ ದಾಖಲಿಸಿದೆ.
ವಸ್ತು ಮತ್ತು ನಿರ್ಮಾಣದ ವಿಶೇಷತೆ: ಈ ವಿಶಿಷ್ಟ ಮರುಬಳಕೆ ಅಥವಾ ಕೃತಕ ವಸ್ತು ಹಾಗೂ ನಿರ್ಮಾಣ ಶೈಲಿಗಾಗಿ ಗಿನ್ನೆಸ್ ಸಂಸ್ಥೆಯು ಇದನ್ನು ಅಧಿಕೃತವಾಗಿ ಗುರುತಿಸಿದೆ. ಇಂಡೋನೇಷ್ಯಾದಲ್ಲಿ ಭಾರತೀಯ ರಾಜಭಾರ ಕಚೇರಿಯು ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ.
ಬಾಲಿಯ ಹಿಂದೂ ಸಂಸ್ಕೃತಿ: ಇಂಡೋನೇಷ್ಯಾ ಮುಸ್ಲಿಂ ಬಾಹುಳ್ಯದ ದೇಶವಾಗಿದ್ದರೂ, ಬಾಲಿ ದವೀಪದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿ ಆಳವಾಗಿ ಬೇರೂರಿದೆ. ಇಲ್ಲಿನ ರಾಮಾಯಣ, ಮಹಾಭಾರತ ಮತ್ತು ಕೇಕಕ್ ನೃತ್ಯಗಳು ಜಾಗತಿಕ ಖ್ಯಾತಿ ಪಡೆದಿವೆ.
ಪ್ರವಾಸಿ ಆಕರ್ಷಣೆ: ಬಾಲಿಯ ಪುರಾತನ ದೇವಾಲಯಗಳ ಸಾಲಿಗೆ ಈ ಬೃಹತ್ ಗಣೇಶ ಪ್ರತಿಮೆಯು ಮತ್ತೊಂದು ಸಾಂಸ್ಕೃತಿಕ ಮೈಲಿಗಲ್ಲಾಗಿ ಸೇರ್ಪಡೆಗೊಂಡಿದೆ.




