
ಅಲಿಗಢ (ಉತ್ತರ ಪ್ರದೇಶ): ತೀವ್ರ ಆರ್ಥಿಕ ಸಂಕಷ್ಟ ಹಾಗೂ ಪತಿಯ ಮದ್ಯವ್ಯಸನದಿಂದ ಐದು ಮಕ್ಕಳನ್ನು ಸಾಕಲು ಸಾಧ್ಯವಾಗದೆ ಕಂಗಾಲಾದ ತಾಯಿಯೊಬ್ಬಳು, ತನ್ನ 20 ದಿನಗಳ ಹಸುಗೂಸನ್ನು ಉತ್ತಮವಾಗಿ ನೋಡಿಕೊಳ್ಳುವ ಬೇರೊಂದು ಕುಟುಂಬಕ್ಕೆ ನೀಡಲು ನರ್ಸಿಂಗ್ ಹೋಮ್ಗೆ ಕರೆತಂದ ಮನಕಲಕುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.
ಸೋನಿ ಎಂಬ ಮಹಿಳೆಗೆ ಈಗಾಗಲೇ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು, 20 ದಿನಗಳ ಹಿಂದೆ ಐದನೇ ಮಗುವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಪತಿ ನಿರುದ್ಯೋಗಿಯಾಗಿದ್ದು, ಸದಾ ಕುಡಿದು ತಿರುಗುತ್ತಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ ಯಾರೋ ನೀಡಿದ ಸಲಹೆಯಂತೆ, ಮಗುವಿಗೆ ಉತ್ತಮ ಭವಿಷ್ಯ ಸಿಗಲಿ ಎಂಬ ಆಸೆಯಿಂದ ತನ್ನ ನೆರೆಯ ರೇಷ್ಮಾ ಎಂಬುವವರ ಜತೆಗೂಡಿ ‘ಆದಿಲ್ ನರ್ಸಿಂಗ್ ಹೋಮ್’ಗೆ ಬಂದು ವೈದ್ಯ ಡಾ. ರಫೀಕ್ ಅವರನ್ನು ಸಂಪರ್ಕಿಸಿದ್ದರು. ಆದರೆ, ಮಗುವನ್ನು ಮಾರಾಟ ಮಾಡಲು ತಂದಿರಬಹುದು ಎಂಬ ಅನುಮಾನಗೊಂಡ ವೈದ್ಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಗು ಮಾರಾಟ ಆರೋಪ ನಿರಾಕರಣೆ: ಪೊಲೀಸರು ಇಬ್ಬರೂ ಮಹಿಳೆಯರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ, ಮಗುವನ್ನು ಮಾರಾಟ ಮಾಡುವ ಉದ್ದೇಶವಿರಲಿಲ್ಲ; ಬಡತನದ ಕಾರಣ ಮಗುವಿಗೆ ಉತ್ತಮ ಪೋಷಣೆ ಸಿಗಲಿ ಎಂದು ಬೇರೆಯವರಿಗೆ ನೀಡಲು ಬಂದಿದ್ದಾಗಿ ತಾಯಿ ಸೋನಿ ಸ್ಪಷ್ಟಪಡಿಸಿದ್ದಾರೆ.
ಪತಿಯ ಪತ್ತೆಗೆ ಪೊಲೀಸರ ಶೋಧ: ಸೋನಿ ಬಳಿ ಮೊಬೈಲ್ ಫೋನ್ ಇಲ್ಲದ ಕಾರಣ ಆಕೆಯ ಪತಿಯನ್ನು ಸಂಪರ್ಕಿಸುವುದು ಕಷ್ಟವಾಗಿದ್ದು, ಕುಟುಂಬದ ಸ್ಥಿತಿಗತಿ ತಿಳಿಯಲು ಹಾಗೂ ಹೇಳಿಕೆ ದಾಖಲಿಸಲು ಪೊಲೀಸರು ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ: ಮಗುವನ್ನು ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಯಾರಿಗೂ ಹಸ್ತಾಂತರಿಸದಂತೆ ಎಚ್ಚರಿಕೆ ವಹಿಸಲಾಗಿದ್ದು, ಮಹಿಳೆಯರಿಂದ ಲಿಖಿತ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ.
ಹಸುಗೂಸಿನ ಸುರಕ್ಷತೆಗೆ ಕ್ರಮ: ನವಜಾತ ಶಿಶುವಿನ ಸುರಕ್ಷತೆ ಮತ್ತು ಆರೈಕೆಯ ಮೇಲೆ ನಿಗಾ ವಹಿಸಲು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.




