
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಕಚ್ಚಾ ತೈಲ ಕಳ್ಳತನ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಯಶಸ್ವಿಯಾಗಿ ಭೇದಿಸಿದೆ. ಒಎನ್‌ಜಿಸಿ (ONGC) ಸೌಲಭ್ಯದಿಂದ ಕಚ್ಚಾ ತೈಲವನ್ನು ಕದ್ದು, ಒಎನ್‌ಜಿಸಿ ಲೋಗೋ ಇರುವ ಟ್ಯಾಂಕರ್ ಮೂಲಕ ಅಹಮದಾಬಾದ್‌ಗೆ ಸಾಗಿಸಿ ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ವತ್ವಾ ಜಿಐಡಿಸಿ ಪ್ರದೇಶದಲ್ಲಿ ನಡೆದ ದಾಳಿಯ ವೇಳೆ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಎಸ್.ಎಲ್. ಚೌಧರಿ ನೇತೃತ್ವದ ಎಟಿಎಸ್ ತಂಡವು ವಾಂಜೋಲ್ ರಿಂಗ್ ರಸ್ತೆ ಬಳಿಯ ಪಾರ್ಕಿಂಗ್ ಸ್ಥಳದ ಮೇಲೆ ದಾಳಿ ನಡೆಸಿದೆ. ಈ ವೇಳೆ ಒಎನ್‌ಜಿಸಿ ಟ್ಯಾಂಕರ್‌ನಿಂದ ಪೈಪ್ ಮೂಲಕ ಐಚರ್ ಟ್ರಕ್‌ನಲ್ಲಿದ್ದ ಟ್ಯಾಂಕ್‌ಗೆ ಕಚ್ಚಾ ತೈಲವನ್ನು ವರ್ಗಾಯಿಸುತ್ತಿರುವುದು ಬೆಳಕಿಗೆ ಬಂದಿದೆ. ಖೇಡಾ ಜಿಲ್ಲೆಯ ಸರಸವ್‌ನಲ್ಲಿರುವ ಒಎನ್‌ಜಿಸಿ ತೈಲ ಬಾವಿ ನಂ. 26ರಿಂದ ಕಾಸಿಂಗ್ ವಾಲ್ವ್ ಮತ್ತು ಪಂಪ್ ಬಳಸಿ ಸುಮಾರು 8,000 ಲೀಟರ್ ಕಚ್ಚಾ ತೈಲವನ್ನು ಕಳವು ಮಾಡಿಕೊಂಡು ಬರಲಾಗಿತ್ತು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೋಟಿ ರೂ. ಮೌಲ್ಯದ ವಸ್ತುಗಳ ವಶ: ವಶಪಡಿಸಿಕೊಂಡಿರುವ 8,000 ಲೀಟರ್ ಕಚ್ಚಾ ತೈಲದ ಮೌಲ್ಯ ಅಂದಾಜು ರೂ. 4 ಲಕ್ಷವಾಗಿದೆ. (ಒಎನ್‌ಜಿಸಿ ಟ್ಯಾಂಕರ್‌ನಲ್ಲಿ 4,500 ಲೀಟರ್ ಹಾಗೂ ಐಚರ್ ಟ್ರಕ್‌ನಲ್ಲಿ 3,500 ಲೀಟರ್ ಇದೆ). ಇದರೊಂದಿಗೆ ಟ್ಯಾಂಕರ್, ಲಾರಿ, ಮೊಬೈಲ್ ಸೇರಿದಂತೆ ಒಟ್ಟು ರೂ. 22.35 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನ: ಗಫರ್ ಅಬ್ದುಲ್‌ಭಾಯ್ ರಂಗ್ರೇಜ್, ಮೊಹ್ಸಿನ್ ರಫೀಕ್‌ಭಾಯ್, ಮೊಹಮ್ಮದ್ ಜಾವೇದ್, ಭಿಕಾಭಾಯ್ ಕಲಾಭಾಯ್ ಚೌಹಾಣ್, ನಾಸಿರುದ್ದೀನ್ ಹಾಗೂ ರೇಸಂಗ್‌ಭಾಯ್ ಸೇರಿದಂತೆ 6 ಜನರನ್ನು ಬಂಧಿಸಲಾಗಿದ್ದು, ಉಸ್ಮಾನ್ ಅಲಿಯಾಸ್ ಟಿಕ್ಡಿ ತಲೆಮರೆಸಿಕೊಂಡಿದ್ದು ವಾಂಟೆಡ್ ಎಂದು ಘೋಷಿಸಲಾಗಿದೆ.
ಕಾನೂನು ಕ್ರಮ: ಗುಜರಾತ್ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಅತ್ಯಾವಶ್ಯಕ ಸರಕುಗಳ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.




