Home ಕ್ರೈಂ ನ್ಯೂಸ್ ಬಸವಣ್ಣರ ಬಗ್ಗೆ ಅವಹೇಳನಕಾರಿ ಲೇಖಕ ರವಿ ಹಂಜ್ ವಿರುದ್ಧ ಕ್ರಮಕ್ಕೆ ಶಿವನಗೌಡ ಟಿ. ಪಾಟೀಲ್ ಆಗ್ರಹ: ವಿವಾದಿತ ಪುಸ್ತಕ ಮುಟ್ಟುಗೋಲಿಗೆ ಒತ್ತಾಯ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಬಸವಣ್ಣರ ಬಗ್ಗೆ ಅವಹೇಳನಕಾರಿ ಲೇಖಕ ರವಿ ಹಂಜ್ ವಿರುದ್ಧ ಕ್ರಮಕ್ಕೆ ಶಿವನಗೌಡ ಟಿ. ಪಾಟೀಲ್ ಆಗ್ರಹ: ವಿವಾದಿತ ಪುಸ್ತಕ ಮುಟ್ಟುಗೋಲಿಗೆ ಒತ್ತಾಯ!

Share
ಬಸವಣ್ಣ
Share

ದಾವಣಗೆರೆ: ವಿಶ್ವಗುರು ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವರು ತಮ್ಮ ‘ಬಸವ ಮಂಟಪ’ ಕೃತಿಯಲ್ಲಿ ಮಾಡಿರುವ ವಿವಾದಾತ್ಮಕ ಹಾಗೂ ಅವಹೇಳನಕಾರಿ ನಿರೂಪಣೆಗಳು ತೀವ್ರ ಖಂಡನೀಯವಾಗಿದ್ದು, ಕೂಡಲೇ ಆ ವಿವಾದಿತ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗತ್ತಿಗೆ ಸಮಾನತೆ, ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದ ಮಹಾನ್ ಮಾನವತಾವಾದಿ ಬಸವಣ್ಣನವರ ಚಾರಿತ್ರ್ಯಕ್ಕೆ ಧಕ್ಕೆ ತರುವಂತಹ ಬರವಣಿಗೆಗಳನ್ನು ಸಮಾಜ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪುಸ್ತಕ ಮುಟ್ಟುಗೋಲಿಗೆ ಆಗ್ರಹ: ಸುಮಾರು 600 ಪುಟಗಳ ‘ಬಸವ ಮಂಟಪ’ ಕೃತಿಯಲ್ಲಿ ಬಸವಣ್ಣನವರ ಕುರಿತು ಮಾಡಿರುವ ವಿವಾದಾತ್ಮಕ ಆರೋಪಗಳು ಸಮಾಜದಲ್ಲಿ ಅಶಾಂತಿ ಮತ್ತು ನೋವು ಉಂಟುಮಾಡಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಕೃತಿಯನ್ನು ಸಮಗ್ರವಾಗಿ ಪರಿಶೀಲಿಸಿ ಮುಟ್ಟುಗೋಲು ಹಾಕಿಕೊಳ್ಳಬೇಕು.

ಲೇಖಕನ ವಿರುದ್ಧ ಕಾನೂನು ಕ್ರಮ: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇತಿಹಾಸದ ಮಹಾನ್ ವ್ಯಕ್ತಿಗಳ ಬಗ್ಗೆ ಆಧಾರರಹಿತ ಆರೋಪ ಮಾಡುವುದನ್ನು ಬಿಟ್ಟು, ಲೇಖಕ ರವಿ ಹಂಜ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು.

ಸಮಾಜದ ಸ್ವಾಸ್ಥ್ಯ ಕಾಪಾಡಲು ಎಚ್ಚರಿಕೆ: ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲದೆ ಇಡೀ ಮಾನವಕುಲಕ್ಕೆ ಸಮಾನತೆಯ ಸಂದೇಶ ನೀಡಿದವರು. ಇತಿಹಾಸದ ಹೆಸರಿನಲ್ಲಿ ಸಮಾಜದ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಶಿವನಗೌಡ ಟಿ. ಪಾಟೀಲ್ ಎಚ್ಚರಿಸಿದ್ದಾರೆ.

ಬಸವಣ್ಣನವರ ವಿಚಾರಧಾರೆಯನ್ನು ಪ್ರಶ್ನಿಸುವುದಕ್ಕೂ, ಅವರ ವ್ಯಕ್ತಿತ್ವದ ಬಗ್ಗೆ ಆಧಾರರಹಿತ ಆರೋಪ ಮಾಡುವುದಕ್ಕೂ ವ್ಯತ್ಯಾಸವಿದ್ದು, ಅವರ ಗೌರವ ಮತ್ತು ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Share

Recent Posts

Recent Comments

No comments to show.
Related Articles