
ವಾರಂಗಲ್: ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಸಾಲದ ಸುಳಿಗೆ ಸಿಲುಕಿ, ಕೇವಲ 50,000 ರೂಪಾಯಿ ಸಾಲದ ಮರುಪಾವತಿ ವಿಚಾರವಾಗಿ ಎದುರಿಸಿದ ತೀವ್ರ ಅವಮಾನ ಹಾಗೂ ಕಿರುಕುಳದಿಂದ ನೊಂದು ದಂಪತಿಯು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ.
ಸಾವಿಗೂ ಮುನ್ನ ಅವರು ತಮ್ಮ ಸಾಲದ ಕಷ್ಟ ಹಾಗೂ ನೋವನ್ನು ವಿವರಿಸಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ 4 ಪುಟಗಳ ಮರಣಪತ್ರ ಬರೆದಿಟ್ಟಿದ್ದಾರೆ.
ತಾವು ಮೃತಪಟ್ಟರೆ ತಮ್ಮ ಸಾಕು ನಾಯಿಯನ್ನು ನೋಡಿಕೊಳ್ಳುವವರು ಯಾರೂ ಇರುವುದಿಲ್ಲ ಎಂಬ ಕಳಕಡಿಯಿಂದ ದಂಪತಿ ನಾಯಿಯನ್ನೂ ಕೊಂದು, ತಾವೂ ಪ್ರಾಣ ಬಿಟ್ಟಿರುವುದು ಎಲ್ಲರಲ್ಲೂ ಕರುಳು ಚುರುಕಿಸುವಂತೆ ಮಾಡಿದೆ.
ಘಟನೆಯ ವಿವರ ಹಾಗೂ ಮೃತರ ವಿವರ: ನಲ್ಲಪೊಗುಲ ಸಂಜಯ್ ಕುಮಾರ್ (60) ಹಾಗೂ ಅವರ ಪತ್ನಿ ಶೋಭಾ (53) ಮೃತಪಟ್ಟ ದುರ್ದೈವಿ ದಂಪತಿ. ಸಂಜಯ್ ಕುಮಾರ್ ಖಾಸಗಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರೆ, ಶೋಭಾ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು.
ಸಾಲದ ಕಿರುಕುಳ ಹಾಗೂ ಅವಮಾನ: ದಿವ್ಯಾ ಚಂದ್ರಿಕಾ ಎಂಬ ಮಹಿಳಾ ಟೈಲರ್ ಬಳಿ ಪಡೆದ ₹50,000 ಸಾಲಕ್ಕೆ ಸುಮಾರು 11 ತಿಂಗಳಿಂದ ಪ್ರತಿ ವಾರ ₹750 ಬಡ್ಡಿ ಪಾವತಿಸುತ್ತಿದ್ದರು. ಆದರೆ ಕೇವಲ ಒಂದು ವಾರ ಕಂತು ಬಾಕಿ ಉಳಿದಿದ್ದಕ್ಕೆ ತೀವ್ರವಾಗಿ ಅವಮಾನಿಸಿ ಕಿರುಕುಳ ನೀಡಲಾಗಿದೆ ಎಂದು ದಂಪತಿ ತಮ್ಮ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ.
ಸಾಕು ನಾಯಿಯ ಹತ್ಯೆ ಹಾಗೂ ಕಡೆ ಆಸೆ: ತಮ್ಮ ಮರಣದ ನಂತರ ಸಾಕು ನಾಯಿಯನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂಬ ಭೀತಿಯಿಂದ ಮೊದಲು ನಾಯಿಯನ್ನು ಕೊಂದ ದಂಪತಿ, ತಮ್ಮ ಅಂತ್ಯಕ್ರಿಯೆಯನ್ನು ತಮ್ಮ ನಾಯಿಯ ಜೊತೆಜೊತೆಯಲ್ಲೇ ನೆರವೇರಿಸುವಂತೆ ಮತ್ತು ತಮ್ಮ ಅಂಗಾಂಗ ದಾನ ಮಾಡಲು ಅವಕಾಶ ಕಲ್ಪಿಸುವಂತೆ ಸಿಎಂಗೆ ಮನವಿ ಮಾಡಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಪ್ರತಿಕ್ರಿಯೆ: ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ತೆಲಂಗಾಣ ಡಿಜಿಪಿ ಸಿ.ವಿ. ಆನಂದ್, ಸಾರ್ವಜನಿಕರು ಮತ್ತು ಪೊಲೀಸರು ಆರ್ಥಿಕ ಸಾಲದ ಸುಳಿಗೆ ಸಿಲುಕಿಕೊಳ್ಳದಂತೆ ಎಚ್ಚರಿಕೆ ನೀಡಿದ್ದು, ಸಾಲದ ಬಡ್ಡಿಯ ಕಿರುಕುಳ ಹಾಗೂ ಅವಮಾನದ ಈ ಘಟನೆ ಅತ್ಯಂತ ಖೇದಕರ ಎಂದಿದ್ದಾರೆ.
ಪೊಲೀಸರು ಮರಣಪತ್ರವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು, ಸಾಲ ನೀಡಿದವರ ಕಿರುಕುಳದ ಕುರಿತು ತನಿಖೆ ಮುಂದುವರೆಸಿದ್ದಾರೆ.




