
ನವದೆಹಲಿ / ಮುಂಬೈ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯಲ್ಲಿ ತೀವ್ರ ಏರಿಳಿತ ಕಂಡುಬರುತ್ತಿದ್ದು, ತಾಂತ್ರಿಕ ವಿಶ್ಲೇಷಕರ ಪ್ರಕಾರ ಬೆಳ್ಳಿ ದರ ಪ್ರತಿ ಔನ್ಸ್ಗೆ 35 ಡಾಲರ್ಗೆ ಕುಸಿಯುವ ಸಾಧ್ಯತೆಯಿದೆ. ಒಂದು ವೇಳೆ ಚಿನ್ನದ ಬೆಲೆ ಸ್ಥಿರವಾಗಿದ್ದು, ಬೆಳ್ಳಿ 35 ಡಾಲರ್ಗೆ ಇಳಿದರೆ, ಭಾರತದಲ್ಲಿ 1 ಕೆಜಿ ಬೆಳ್ಳಿಯ ಬೆಲೆಯು 10 ಗ್ರಾಂ ಚಿನ್ನದ ಬೆಲೆಗಿಂತಲೂ ಕಡಿಮೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಜನವರಿ ಅಂತ್ಯದಲ್ಲಿ 121.6 ಡಾಲರ್ನಷ್ಟು ದಾಖಲೆಯ ಗರಿಷ್ಠ ಮಟ್ಟದಲ್ಲಿದ್ದ ಬೆಳ್ಳಿ ಬೆಲೆ ಈಗಾಗಲೇ ಶೇ. 62ರಷ್ಟು ಕುಸಿದಿದೆ. ಸದ್ಯ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ10 ಗ್ರಾಂ ಚಿನ್ನದ ಬೆಲೆ ಅಂದಾಜು 1,31,660 ರೂ. ಇದ್ದರೆ, 1 ಕೆಜಿ ಬೆಳ್ಳಿ ಬೆಲೆ 1,64,773 ರೂ. ಆಸುಪಾಸಿನಲ್ಲಿದೆ. ಅಂದರೆ 1 ಕೆಜಿ ಬೆಳ್ಳಿಯು 10 ಗ್ರಾಂ ಚಿನ್ನಕ್ಕಿಂತ ಸುಮಾರು 1.25 ಪಟ್ಟು ಹೆಚ್ಚಾಗಿದೆ.
ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ 35 ಡಾಲರ್ಗೆ ಕುಸಿದರೆ, ದೇಶೀಯ ಮಾರುಕಟ್ಟೆಯಲ್ಲಿ 1 ಕೆಜಿ ಬೆಳ್ಳಿ ಬೆಲೆ 1.28 ರಿಂದ 1.29 ಲಕ್ಷ ರೂ.ಗಳಿಗೆ ಇಳಿಯಲಿದ್ದು, 10 ಗ್ರಾಂ ಚಿನ್ನಕ್ಕಿಂತ ಅಗ್ಗವಾಗಲಿದೆ.
ಚಿನ್ನ-ಬೆಳ್ಳಿ ಅನುಪಾತ : ಪ್ರಸ್ತುತ ಚಿನ್ನ ಮತ್ತು ಬೆಳ್ಳಿಯ ಅನುಪಾತ 82ರಷ್ಟಿದೆ. ಬೆಳ್ಳಿ 35 ಡಾಲರ್ಗೆ ಇಳಿದು ಚಿನ್ನ 3,765 ಡಾಲರ್ನಲ್ಲಿಯೇ ಮುಂದುವರಿದರೆ, ಈ ಅನುಪಾತ 107ಕ್ಕೆ ಏರಲಿದೆ. ಇದು 2020ರ ಕೋವಿಡ್ ಕುಸಿತದ ನಂತರದ ಅತಿ ದೊಡ್ಡ ಮಟ್ಟವಾಗಲಿದೆ.
ಬೆಳ್ಳಿ ಕುಸಿತಕ್ಕೆ ಕಾರಣ: ಬಲಗೊಳ್ಳುತ್ತಿರುವ ಅಮೆರಿಕನ್ ಡಾಲರ್, ಡಿಸೆಂಬರ್ನಲ್ಲಿ ಯುಎಸ್ ಬಡ್ಡಿದರ ಏರಿಕೆಯ ನಿರೀಕ್ಷೆ ಹಾಗೂ ಜಾಗತಿಕ ಕೈಗಾರಿಕಾ ಮತ್ತು ಆಭರಣ ಬೇಡಿಕೆಯಲ್ಲಿನ ಇಳಿಕೆ ಬೆಳ್ಳಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಫೆಡ್ ಸಭೆಯತ್ತ ಚಿತ್ತ: ಚಿನ್ನದ ಬೆಲೆಯೂ ಒತ್ತಡದಲ್ಲಿದ್ದು, 3,500 ಡಾಲರ್ಗೆ ಇಳಿಯುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಅಮೆರಿಕದ ಫೆಡರಲ್ ರಿಸರ್ವ್ ನೀತಿ ಸಭೆಯ ವಿವರಗಳು ಪ್ರಕಟವಾದ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಯ ಮುಂದಿನ ದಿಕ್ಕು ನಿರ್ಧಾರವಾಗಲಿದೆ.




