
ನ್ಯೂಯಾರ್ಕ್ / ನವದೆಹಲಿ: ಅಮೆರಿಕದ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ದೆಹಲಿ ಮೂಲದ ವಿದ್ಯಾರ್ಥಿನಿಯೊಬ್ಬರು “ಟೀ ಅಥವಾ ಇನ್ನೇನಾದರೂ ಕುಡಿಯುತ್ತಾ ಮಾತನಾಡೋಣ” ಎಂದು ಆಹ್ವಾನ ನೀಡಿರುವುದು ಸಭಾಂಗಣದಲ್ಲಿ ನಗೆಯ ಅಲೆ ಎಬ್ಬಿಸಿದೆ.
ಕೊಲಂಬಿಯಾ ವಿವಿಯಲ್ಲಿ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ (MPA) ವ್ಯಾಸಂಗ ಮಾಡುತ್ತಿರುವ ರಿದ್ಧಿ ಕಪೂರ್, ಪ್ರಶ್ನೋತ್ತರ ಅವಧಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸಿದರು.
ಭಾರತದಲ್ಲಿ ಪ್ರತಿಭಟನೆಗಳ ವೇಳೆ ರಾಹುಲ್ ಗಾಂಧಿ ಬಂಧನಕ್ಕೊಳಗಾಗಿದ್ದಾಗ ತಾನು ತರಗತಿಯಲ್ಲಿ ಅವರ ಪರವಾಗಿ ಭಾಷಣ ಮಾಡಿದ್ದಾಗಿ ತಿಳಿಸಿದ ವಿದ್ಯಾರ್ಥಿನಿ, ಬಳಿಕ ದೆಹಲಿಯ ವಾಯುಮಾಲಿನ್ಯ ಸಮಸ್ಯೆಗೆ ತಾನೊಂದು ಪರಿಹಾರವನ್ನು ಕಂಡುಕೊಂಡಿರುವುದಾಗಿ ಹೇಳಿದರು.
ಇದಕ್ಕೆ ಕುತೂಹಲಗೊಂಡ ರಾಹುಲ್ ಗಾಂಧಿ, “ದೆಹಲಿ ಮಾಲಿನ್ಯ ಸಮಸ್ಯೆಗೆ ಏನು ಪರಿಹಾರ?” ಎಂದು ಪ್ರಶ್ನಿಸಿದರು. ಆಗ ರಿದ್ಧಿ ಕಪೂರ್, “ನೀವು ಇಷ್ಟಪಟ್ಟರೆ ಅದರ ಬಗ್ಗೆ ಟೀ ಕುಡಿಯುತ್ತಾ ಮಾತನಾಡಬಹುದು!” ಎಂದರು. ಇಡೀ ಸಭಾಂಗಣ ನಗೆಗಡಲಲ್ಲಿ ತೇಲಿದಾಗ, ರಾಹುಲ್ ಗಾಂಧಿ ನಗುತ್ತಲೇ “ಸರಿ, ಸರಿ, ಖಂಡಿತ ಮಾತನಾಡೋಣ” ಎಂದು ಒಪ್ಪಿಗೆ ಸೂಚಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಗೆ ಶ್ಲಾಘನೆ: ಭಾರತದಲ್ಲಿ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಭಯಪಡುತ್ತಿದ್ದರು, ಆದರೆ ವಿದ್ಯಾರ್ಥಿಗಳು ಆ ಭಯವನ್ನು ಹೋಗಲಾಡಿಸಿ ಪೋಷಕರ ಭವಿಷ್ಯವನ್ನೂ ರಕ್ಷಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.
2047ರ ಗುರಿಗೆ ಟಾಂಗ್: 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂಬ ಪ್ರಧಾನಿ ಮೋದಿಯವರ ‘ವಿಕಸಿತ ಭಾರತ’ ಘೋಷಣೆಯನ್ನು ಟೀಕಿಸಿದ ಅವರು, ತಮಗೆ ಸುಮ್ಮನೆ ಇಂತಹ ಇಸವಿಗಳನ್ನು ಘೋಷಿಸುವುದು ಇಷ್ಟವಿಲ್ಲ ಎಂದರು.
ಬಿಜೆಪಿ ತೀವ್ರ ವಾಗ್ದಾಳಿ: “ಭಾರತ ಆರ್ಥಿಕ ವಿಪತ್ತಿನ ಮೇಲೆ ಕುಳಿತಿದೆ” ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಕಿಡಿಕಾರಿದ್ದು, ರಾಹುಲ್ ಅವರು ಭಾರತ ವಿರೋಧಿ ಪ್ರಚಾರದ ನಾಯಕರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಈ ಸ್ವಾರಸ್ಯಕರ ಸಂವಾದದ ವಿಡಿಯೋವನ್ನು ವಿದ್ಯಾರ್ಥಿನಿ ರಿದ್ಧಿ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.




