
ಜಾನ್ಸಿ (ಉತ್ತರ ಪ್ರದೇಶ): ತನ್ನ ದೈಹಿಕ ಸೌಂದರ್ಯ ಹಾಗೂ ಕೂದಲು ಉದುರುವಿಕೆ ಸಮಸ್ಯೆಯಿಂದ ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದ 18 ವರ್ಷದ 12ನೇ ತರಗತಿ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಜಾನ್ಸಿ ಜಿಲ್ಲೆಯಲ್ಲಿ ನಡೆದಿದೆ.
ಮೃತನ ಸಹೋದರ ತಿಳಿಸಿರುವ ಮಾಹಿತಿಯ ಪ್ರಕಾರ, ಯುವಕ ತನ್ನ ನೋಟ ಮತ್ತು ಕೂದಲು ಉದುರುತ್ತಿರುವ ಬಗ್ಗೆ ತೀವ್ರ ಅತೃಪ್ತಿ ಹೊಂದಿದ್ದನು. ಈ ಕಾರಣದಿಂದಾಗಿ ಮಾನಸಿಕವಾಗಿ ನೊಂದಿದ್ದ ಆತ ಆಗಾಗ್ಗೆ ಆತ್ಮಹತ್ಯೆಯ ಮಾತುಗಳನ್ನಾಡುತ್ತಿದ್ದನು. ಅಲ್ಲದೆ, ಈ ಹಿಂದೆ ಎರಡು ಬಾರಿ ಆತ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಕುಟುಂಬಸ್ಥರು ಕಣ್ಣೀರುಹಾಕಿದ್ದಾರೆ.
ಯಾರೊಂದಿಗೂ ಹೆಚ್ಚು ಮಾತನಾಡುತಿರಲಿಲ್ಲ ಮತ್ತು ಹೆಚ್ಚಾಗಿ ಮೊಬೈಲ್ ಗೇಮ್‌ಗಳಲ್ಲಿ ತೊಡಗಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಯ ದಿನದಂದು ಆತ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿರುವುದನ್ನು ಕಂಡ ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಖಿನ್ನತೆಗೆ ಕಾರಣ: ಕೂದಲು ಉದುರುವಿಕೆ ಮತ್ತು ಮುಖದ ಸೌಂದರ್ಯದ ಬಗ್ಗೆ ಅತಿಯಾದ ಕಳವಳ ಹಾಗೂ ಕೀಳರಿಮೆ ಬೆಳೆಸಿಕೊಂಡಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹಿಂದಿನ ಪ್ರಯತ್ನಗಳು: ಯುವಕ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಒಂಟಿತನ ಮತ್ತು ಮೊಬೈಲ್ ಬಳಕೆ ಹೆಚ್ಚಿಸಿಕೊಂಡಿದ್ದ ಎಂದು ಸಹೋದರ ಮಾಹಿತಿ ನೀಡಿದ್ದಾರೆ.
ಪೊಲೀಸರ ತನಿಖೆ: ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದು, ಮುಂದಿನ ತನಿಖೆ ಮುಂದುವರೆಸಿದ್ದಾರೆ.




