ಮಂಗಳೂರು: ತಮಿಳುನಾಡಿನ ಮಧುರೈನ ಪ್ರಸಿದ್ಧ ತಿರುಪ್ಪರಂಕುಂದ್ರಂ ಬೆಟ್ಟದ ಕಾರ್ತಿಕ ದೀಪಂ ವಿವಾದವು ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ತನ್ನ ಹಿಂದಿನ ಡಿಎಂಕೆ ಸರ್ಕಾರದ ಹಾದಿಯನ್ನೇ ತುಳಿದು, ‘ದೇವರ ವಿರೋಧಿ’ ಇಮೇಜ್ ಅನ್ನು ಅಂಟಿಸಿಕೊಳ್ಳುತ್ತಿದೆ ಎಂದು ‘ವಿ ದಿ ಲೀಡರ್ಸ್’ ಸಂಸ್ಥಾಪಕ ಹಾಗೂ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ತೀವ್ರವಾಗಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ‘ದೀಪತೂಣ್’ (ಕಲ್ಲಿನ ಸ್ತಂಭ) ಮೇಲೆ ಸಾಂಪ್ರದಾಯಿಕ ದೀಪ ಹಚ್ಚುವುದನ್ನು ವಿರೋಧಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿದರು. ದೀಪ ಹಚ್ಚುವುದು ಜನರ ಧಾರ್ಮಿಕ ನಂಬಿಕೆ ಹಾಗೂ ಪರಂಪರೆಗೆ ಆಳವಾಗಿ ಬೆಸೆದುಕೊಂಡಿರುವ ಆಚರಣೆಯಾಗಿದ್ದು, ಮದ್ರಾಸ್ ಹೈಕೋರ್ಟ್ನ ಸ್ಪಷ್ಟ ಆದೇಶವಿದ್ದರೂ ಸಹ ಸರ್ಕಾರವು ಮೇಲ್ಮನವಿ ಹಾಗೂ ಆಡಳಿತಾತ್ಮಕ ವಿಳಂಬದ ಮೂಲಕ ವಿವಾದವನ್ನು ವಿಸ್ತರಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ತಿಕ ದೀಪಂ ವಿವಾದದ ಹಿನ್ನೆಲೆಯಲ್ಲಿ ನವೆಂಬರ್ 12ರಂದು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವ ತಮಿಳುನಾಡು ಸರ್ಕಾರ, ಬೆಟ್ಟ ಮತ್ತು ದೇವಾಲಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ನಿಯಂತ್ರಣಕ್ಕೆ ನೀಡುವುದನ್ನು ಹಾಗೂ ದೀಪತೂಣ್ನಲ್ಲಿ ಶಾಶ್ವತ ದೀಪ ಬೆಳಗುವುದನ್ನು ವಿರೋಧಿಸಿದೆ. ಕಳೆದ 150 ವರ್ಷಗಳಿಂದ ದೀಪ ಮಂಟಪದಲ್ಲಿ ಮಾತ್ರ ದೀಪ ಹಚ್ಚುವ ಸಂಪ್ರದಾಯವಿದೆ ಎಂದು ವಾದಿಸಿರುವ ಸರ್ಕಾರ, ಕಾನೂನು ಸುವ್ಯವಸ್ಥೆ ಮತ್ತು ಆಗಮ ಶಾಸ್ತ್ರದ ನಿಯಮಗಳ ಅನ್ವಯ ದೇವಾಲಯದ ಆಡಳಿತ ಮಂಡಳಿಯೇ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಸಮರ್ಥಿಸಿಕೊಂಡಿದೆ.
ಹೈಕೋರ್ಟ್ ಆದೇಶ ಪಾಲನೆಗೆ ಆಗ್ರಹ: ಮದ್ರಾಸ್ ಹೈಕೋರ್ಟ್ನ ದ್ವಿಸದಸ್ಯ ಪೀಠವು ಎಎಸ್ಐ ನಿಯಮಾವಳಿ ಮತ್ತು ಭದ್ರತಾ ವ್ಯವಸ್ಥೆಯಡಿ ದೀಪತೂಣ್ನಲ್ಲಿ ದೀಪ ಹಚ್ಚಲು ಅನುಮತಿ ನೀಡಿರುವುದರಿಂದ, ವಿಜಯ್ ಸರ್ಕಾರ ತಕ್ಷಣವೇ ನ್ಯಾಯಾಲಯದ ಆದೇಶವನ್ನು ಗೌರವಿಸಿ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಅಣ್ಣಾಮಲೈ ಒತ್ತಾಯಿಸಿದ್ದಾರೆ.
ಟಿವಿಕೆ ಸರ್ಕಾರದ ಕಾನೂನು ಸಮರ್ಥನೆ: ಸಾಂಪ್ರದಾಯಿಕವಾಗಿ ದೀಪ ಮಂಟಪದಲ್ಲೇ ದೀಪ ಹಚ್ಚಲಾಗುತ್ತಿದ್ದು, ಹೊಸದಾಗಿ ಬೇರೆಡೆ ದೀಪ ಹಚ್ಚುವುದರಿಂದ ವಿವಿಧ ಧರ್ಮಗಳ ನಡುವೆ ಸೌಹಾರ್ದತೆಗೆ ಧಕ್ಕೆಯಾಗಿ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂದು ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
ಬಿಜೆಪಿಯಿಂದ ತೀವ್ರ ಟೀಕಾಪ್ರಹಾರ: ಹಿಂದೂ ಧಾರ್ಮಿಕ ಆಚರಣೆಗಳನ್ನು ನಿರ್ಬಂಧಿಸಲು ವಿಜಯ್ ನೇತೃತ್ವದ ಟಿವಿಕೆ ಆಡಳಿತವು ಹಿಂದಿನ ಡಿಎಂಕೆ ಸರ್ಕಾರದ ಧೋರಣೆಯನ್ನೇ ಅನುಸರಿಸುತ್ತಿದೆ ಎಂದು ತಮಿಳುನಾಡು ಬಿಜೆಪಿ ಮುಖ್ಯ ವಕ್ತಾರ ನಾರಾಯಣ ತಿರುಪತಿ ಕಿಡಿಕಾರಿದ್ದಾರೆ.
ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಧ್ವಜಾರೋಹಣದೊಂದಿಗೆ ಕಾರ್ತಿಕ ದೀಪಂ ಉತ್ಸವಕ್ಕೆ ಈಗಾಗಲೇ ಚಾಲನೆ ದೊರೆತಿದ್ದು, ನವೆಂಬರ್ 24ರಂದು ಮಹಾ ದೀಪಂ ಜರುಗಲಿದೆ. ಈ ನಡುವೆ, ಈ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯು ನವೆಂಬರ್ 17ರಂದು ಸುಪ್ರೀಂ ಕೋರ್ಟ್ನಲ್ಲಿ ನಡೆಯಲಿರುವುದು ಇಡೀ ತಮಿಳುನಾಡು ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ.





Leave a comment