ಕಂಧಮಾಲ್: ಒಡಿಶಾ ರಾಜ್ಯದ ಕಂಧಮಾಲ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ವೇಳೆ ಕಂದಕಕ್ಕೆ ಬಿದ್ದು ನಾಪತ್ತೆಯಾಗಿದ್ದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಬರೋಬ್ಬರಿ 14 ದಿನಗಳ ಬಳಿಕ ಪವಾಡಸದೃಶವಾಗಿ ಜೀವಂತವಾಗಿ ಪತ್ತೆಯಾಗಿದ್ದಾರೆ. ದಂಗಾಸಿ ಗ್ರಾಮದ ಬಳಿ ಜಾನುವಾರು ಮೇಯಿಸಲು ತೆರಳಿದ್ದ ದನ ಕಾಯುವವನೊಬ್ಬನಿಗೆ ಶಿಕ್ಷಕನ ಕ್ಷೀಣ ಧ್ವನಿ ಕೇಳಿಸಿದ್ದು, ತಕ್ಷಣ ಗ್ರಾಮಸ್ಥರ ಸಹಾಯದಿಂದ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಕ್ಟೋಬರ್ 29ರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ದಂಗಾಸಿ ಗ್ರಾಮದಲ್ಲಿ ಭಾರೀ ಭೂಕುಸಿತ ಸಂಭವಿಸಿತ್ತು. ಈ ವೇಳೆ ಗ್ರಾಮದ ಕಡೆಗೆ ತೆರಳುತ್ತಿದ್ದ ಇಂದ್ರಗಢ ಪಂಚಾಯತ್ನ ಶಾಲಾ ಶಿಕ್ಷಕ ಮೋಹನ್ ಮಹಾರಾಣಾ ಕತ್ತಲಲ್ಲಿ ಆಕಸ್ಮಿಕವಾಗಿ ಸಮೀಪದ ಗುಡ್ಡದ ಕೆಳಗಿನ ಆಳವಾದ ಕಂದಕಕ್ಕೆ ಬಿದ್ದಿದ್ದರು. ಸುತ್ತಲೂ ದಟ್ಟ ಕಾಡಿದ್ದು, ಯಾರೂ ಇಲ್ಲದ ಕಾರಣ ಅವರ ಸಹಾಯದ ಕೂಗು ಯಾರಿಗೂ ಕೇಳಿಸಿರಲಿಲ್ಲ. ಸತತ 14 ದಿನಗಳ ಕಾಲ ಯಾವುದೇ ಆಹಾರವಿಲ್ಲದೆ, ಕಂದಕದಲ್ಲಿ ಸಂಗ್ರಹವಾಗಿದ್ದ ಮಣ್ಣು ಮಿಶ್ರಿತ ಮಳೆ ನೀರನ್ನೇ ಕುಡಿಯುತ್ತಾ ಅವರು ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪವಾಡಸದೃಶ ರಕ್ಷಣೆ: 14 ದಿನಗಳ ಕಾಲ ಕುಟುಂಬಸ್ಥರು ಹಾಗೂ ಪೊಲೀಸರು ನಡೆಸಿದ ಹುಡುಕಾಟ ವಿಫಲವಾಗಿತ್ತು. ಶನಿವಾರ ದನ ಕಾಯುವವನೊಬ್ಬ ಕಂದಕದ ಬಳಿ ಹೋದಾಗ ಕೇಳಿಸಿದ ಕ್ಷೀಣ ಧ್ವನಿಯಿಂದ ಈ ವಿಷಯ ಬೆಳಕಿಗೆ ಬಂದಿದೆ.
18 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಾಟ: ಶಿಕ್ಷಕ ಗಂಭೀರ ಸ್ಥಿತಿಯಲ್ಲಿದ್ದ ಕಾರಣ, ಗ್ರಾಮಸ್ಥರು ಒಟ್ಟಾಗಿ ಸೇರಿ ಆತನನ್ನು ಬಿದಿರಿನ ಹಂಗಾಮಿ ಸ್ಟ್ರೇಚರ್ ಮೇಲೆ ಮಲಗಿಸಿ ಸುಮಾರು 18 ಕಿಲೋಮೀಟರ್ ದೂರದವರೆಗೆ ನಡೆದುಕೊಂಡೇ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶಿಕ್ಷಕರ ಆರೋಗ್ಯ ಸ್ಥಿತಿ ಗಂಭೀರ: ಸುದೀರ್ಘ ಕಾಲ ಆಹಾರವಿಲ್ಲದೆ ಕಂದಕದಲ್ಲಿ ನರಳಿದ್ದರಿಂದ ಮತ್ತು ಮಣ್ಣು ಮಿಶ್ರಿತ ನೀರನ್ನು ಸೇವಿಸಿದ್ದರಿಂದ ಮೋಹನ್ ಮಹಾರಾಣಾ ಅವರ ಆರೋಗ್ಯ ಗಂಭೀರವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.





Leave a comment