ಚೆನ್ನೈ: ಮುಂಬರುವ ‘ಓಂ: ಚಾಪ್ಟರ್ ಒನ್’ (OM: Chapter One) ಚಿತ್ರದ ಪೂರ್ವಭಾವಿ ಬಿಡುಗಡೆ ಸಮಾರಂಭದಲ್ಲಿ ನಟಿ ಸಾಯಿ ಪಲ್ಲವಿ ತಮ್ಮ ಸಹನಟ ಧನುಷ್ಗೆ ವಿಶೇಷ ಮನವಿಯೊಂದನ್ನು ಮಾಡಿದ್ದು, ರಾಜಕೀಯ ಪ್ರವೇಶದ ಕಾರಣಕ್ಕೆ ನಟನೆಯನ್ನು ಎಂದಿಗೂ ನಿಲ್ಲಿಸಬೇಡಿ ಎಂದು ಭಾವನಾತ್ಮಕವಾಗಿ ಕೋರಿಕೊಂಡಿದ್ದಾರೆ.
ತಮಿಳು ನಟ ದಳಪತಿ ವಿಜಯ್ ಅವರು ಸಿನಿಮಾಗಳಿಂದ ದೂರಾಗಿ ರಾಜಕೀಯ ಪ್ರವೇಶಿಸಿರುವುದನ್ನು ಉಲ್ಲೇಖಿಸಿದ ಸಾಯಿ ಪಲ್ಲವಿ, ಬೆಳ್ಳಿತೆರೆಯು ಇಂತಹ ಪ್ರತಿಭಾವಾನ್ವಿತ ನಟನನ್ನು ಕಳೆದುಕೊಳ್ಳಬಾರದು ಎಂದು ಆಶಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಧನುಷ್ ಅವರೊಂದಿಗಿನ ಒಡನಾಟ ಹಾಗೂ ಅವರ ಸಿನಿಮಾಗಳ ಪ್ರಭಾವವನ್ನು ಸಾಯಿ ಪಲ್ಲವಿ ಸ್ಮರಿಸಿದ್ದಾರೆ. ‘ಪೊಲ್ಲಾದವನ್’ ಚಿತ್ರದ ನಂತರ ಜನರಲ್ಲಿ ಉಂಟಾದ ಬದಲಾವಣೆ ಮತ್ತು ಧನುಷ್ ಅವರ ನಟನೆಯ ಶೈಲಿ ಸಮಾಜದ ಮೇಲೆ ಬೀರಿದ ಪ್ರಭಾವವನ್ನು ಕೊಂಡಾಡಿದರು. “ನೀವು ಯಾವುದೇ ಹಾದಿಯನ್ನು ಆರಿಸಿಕೊಳ್ಳಿ, ಆದರೆ ದಯವಿಟ್ಟು ನಟಿಸುವುದನ್ನು ನಿಲ್ಲಿಸಬೇಡಿ. ನಾವೆಲ್ಲರೂ ಒಬ್ಬ ಮಹಾನ್ ನಟನನ್ನು ಕಳೆದುಕೊಳ್ಳಬೇಕಾಗುತ್ತದೆ” ಎಂದು ಮನವಿ ಮಾಡಿದ್ದು, ಈ ವೇಳೆ ಸಭೆಯಲ್ಲಿದ್ದ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ.
ವಿಜಯ್ ರಾಜಕೀಯ ಪ್ರವೇಶದ ಪ್ರಸ್ತಾಪ: ತಮಿಳು ನಟ ವಿಜಯ್ ಸಿನಿಮಾಗಳಿಗೆ ವಿದಾಯ ಹೇಳಿ ರಾಜಕೀಯಕ್ಕೆ ಪ್ರವೇಶಿಸಿರುವುದನ್ನು ಉಲ್ಲೇಖಿಸಿದ ಸಾಯಿ ಪಲ್ಲವಿ, ಅದೇ ರೀತಿ ಧನುಷ್ ಕೂಡ ಸಿನಿಮಾಗಳಿಂದ ದೂರಾಗಬಾರದು ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಧನುಷ್ರಿಂದ ಸಾಯಿ ಪಲ್ಲವಿ ಸಮರ್ಥನೆ: ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ಸೀತಾ ದೇವಿ ಪಾತ್ರದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ ವಿರುದ್ಧ ಆನ್ಲೈನ್ನಲ್ಲಿ ಕೇಳಿಬಂದ ಟೀಕೆಗಳಿಗೆ ನಟ ಧನುಷ್ ವೇದಿಕೆಯಲ್ಲಿಯೇ ತಿರುಗೇಟು ನೀಡಿದ್ದು, ಸಾಯಿ ಪಲ್ಲವಿ ಅವರ ಸಮರ್ಪಣಾ ಭಾವ ಮತ್ತು ಶುದ್ಧ ಮನಸ್ಸನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
‘ಓಂ: ಚಾಪ್ಟರ್ ಒನ್’ ಬಿಡುಗಡೆ: ರಾಜ್ಕುಮಾರ್ ಪೆರಿಯಸಾಮಿ ನಿರ್ದೇಶನದ, ಶೇಷಾಚಲಂ ಅರಣ್ಯದ ಕಳ್ಳಸಾಗಾಣಿಕೆ ಕಥೆಯುಳ್ಳ ಈ ಚಿತ್ರದಲ್ಲಿ ಧನುಷ್ ರಹಸ್ಯ ಕಾರ್ಯಪಡೆಯ ಅಧಿಕಾರಿಯಾಗಿ ಹಾಗೂ ಸಾಯಿ ಪಲ್ಲವಿ ಸಿಬಿಐ/ಐಪಿಎಸ್ ಅಧಿಕಾರಿಯಾಗಿ ನಟಿಸಿದ್ದು, ನವೆಂಬರ್ 20ರಂದು ವಿಶ್ವದಾದ್ಯಂತ ತೆರೆಕಾಣಲಿದೆ.





Leave a comment