ಹೈದರಾಬಾದ್: ತೆಲಂಗಾಣದ ಹೈದರಾಬಾದ್ನಲ್ಲಿ ನಡೆದ ‘ಭಾರತ ಶೃಂಗಸಭೆ 2026’ರಲ್ಲಿ ಯುರೋಪಿಯನ್ ಸೋಶಿಯಲಿಸ್ಟ್ಗಳ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಇಟಾಲಿಯನ್ ರಾಜಕಾರಣಿ ಜಿಯಾಕೊಮೊ ಫಿಲಿಬೆಕ್, ಕಾಂಗ್ರೆಸ್ ಪಕ್ಷದ ‘ವೋಟ್ ಚೋರ್, ಗಡ್ಡಿ ಛೋಡ್’ ಘೋಷಣೆಯನ್ನು ಮೊಳಗಿಸಿದ್ದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಚಪ್ಪಾಳೆ ತಟ್ಟಿ ನಗುತ್ತಿರುವುದು ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಯಾಕೊಮೊ ಫಿಲಿಬೆಕ್, ಮತದಾರರ ಪಟ್ಟಿಗಳ ಪರಿಷ್ಕರಣೆ ಕುರಿತಾಗಿ ರಾಹುಲ್ ಗಾಂಧಿ ನಡೆಸುತ್ತಿರುವ ಅಭಿಯಾನವನ್ನು ಶ್ಲಾಘಿಸಿದರು. “ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಒಂದು ಮತ ಎಂಬ ಸರಳ ತತ್ವವನ್ನು ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದ್ದು, ನಾವು ರಾಹುಲ್ ಗಾಂಧಿ ಪರವಾಗಿ ನಿಲ್ಲಬೇಕು” ಎಂದು ಹೇಳುತ್ತಾ ಇಂಗ್ಲಿಷ್ನಲ್ಲಿ ‘Vote thief, leave your seat’ ಎಂದು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ರಾಹುಲ್ ಗಾಂಧಿ ನಗುತ್ತಾ ಚಪ್ಪಾಳೆ ತಟ್ಟಿದ್ದು ವಿವಾದದ ಸ್ವರೂಪ ಪಡೆದುಕೊಂಡಿದೆ.
ಕೇಂದ್ರ ಸಚಿವ ಕಿರಣ್ ರಿಜಿಜು ಕಿಡಿ: ವಿದೇಶಿಯೊಬ್ಬರು ದೇಶವನ್ನು ಅವಮಾನಿಸಿದಾಗ ಯಾರಾದರೂ ನಗುತ್ತಾರೆಯೇ? ಎಂದು ಪ್ರಶ್ನಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ಅವರ ವರ್ತನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಬಿಜೆಪಿ ಮತ್ತು ಬಿಆರ್ಎಸ್ ವಾಗ್ದಾಳಿ: ಭಾರತದ ಆಂತರಿಕ ರಾಜಕೀಯ ವ್ಯವಹಾರಗಳಲ್ಲಿ ವಿದೇಶಿ ನಾಯಕರು ಹಸ್ತಕ್ಷೇಪ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದು, ಇದು ದೇಶದ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಹಾಗೂ ದೇಶದ್ರೋಹದ ಸಮಾನ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಆರ್ಎಸ್ ನಾಯಕ ಕಾರ್ತಿಕ್ ಇಂದ್ರ ರೆಡ್ಡಿ ಕೂಡ ವಿದೇಶಿ ವ್ಯಕ್ತಿಗಳ ಹಸ್ತಕ್ಷೇಪವನ್ನು ಖಂಡಿಸಿದ್ದಾರೆ.
ಶಿವಸೇನೆ (ಯುಬಿಟಿ) ಸಮರ್ಥನೆ: ಇಟಲಿ ಪ್ರಧಾನಿಯೊಂದಿಗೆ ನಮ್ಮ ಪ್ರಧಾನಿ ಸ್ನೇಹದಿಂದ ಇರಬಹುದಾದರೆ, ಇಟಲಿಯ ರಾಜಕಾರಣಿ ಬಂದು ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದರಲ್ಲಿ ತಪ್ಪೇನಿದೆ ಎಂದು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಸಮರ್ಥಿಸಿಕೊಂಡಿದ್ದಾರೆ.
- BJP Criticism
- Congress Political Controversy
- foreign interference India
- Giacomo Filibeck
- Hyderabad Bharat Summit
- Kiren Rijiju
- Rahul Gandhi
- Sanjay Raut
- Telangana news
- Vote Chor slogan
- ಕಾಂಗ್ರೆಸ್ ವಿವಾದ
- ಕಿರಣ್ ರಿಜಿಜು
- ಜಿಯಾಕೊಮೊ ಫಿಲಿಬೆಕ್
- ತೆಲಂಗಾಣ ಸುದ್ದಿ
- ಬಿಜೆಪಿ ಆಕ್ರೋಶ
- ರಾಹುಲ್ ಗಾಂಧಿ
- ವಿದೇಶಿ ಹಸ್ತಕ್ಷೇಪ
- ವೋಟ್ ಚೋರ್ ಗಡ್ಡಿ ಛೋಡ್
- ಸಂಜಯ್ ರಾವತ್
- ಹೈದರಾಬಾದ್ ಶೃಂಗಸಭೆ





Leave a comment