ಹೊಸದೆಹಲಿ/ಲಕ್ನೋ: 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಲ್ಪಸಂಖ್ಯಾತರ ಮತಬ್ಯಾಂಕ್ ಸೆಳೆಯಲು ‘ಅಬ್ದುಲ್’ ರಾಜಕೀಯ ಪ್ರಸ್ತಾಪಿಸಿ ಆಡಳಿತ ಮತ್ತು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಶಕಗಳಿಂದ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ‘ಅಬ್ದುಲ್’ ಕೇವಲ ದರಿ (ಕಾರ್ಪೆಟ್) ಹಾಸಲು, ಜೈಲಿಗೆ ಹೋಗಲು ಮತ್ತು ಜೈಕಾರ ಹಾಕಲು ಸೀಮಿತವಾಗಿದ್ದ. ಆದರೆ ಇನ್ಮುಂದೆ ಅಬ್ದುಲ್ ಎಂಎಲ್ಎ, ಎಂಪಿ ಆಗಲಿದ್ದಾನೆ ಹೊರತು ನೆಹರೂ-ಗಾಂಧಿ ಹಾಗೂ ಯಾದವ್ ಕುಟುಂಬಗಳಿಗೆ ರಾಜಕೀಯ ಗುಲಾಮನಾಗುವುದಿಲ್ಲ ಎಂದು ಓವೈಸಿ ಸವಾಲು ಎಸೆದಿದ್ದಾರೆ.
ಓವೈಸಿಯ ಈ ‘ಅಬ್ದುಲ್’ ರಾಜಕೀಯ ಹೇಳಿಕೆಗೆ ಸಮಾಜವಾದಿ ಪಾರ್ಟಿ, ಕಾಂಗ್ರೆಸ್ ಮತ್ತು ಆರ್ಜೆಡಿ ತೀವ್ರ ತಿರುಗೇಟು ನೀಡಿವೆ. ಮುಖ್ಯವಾಗಿ ತೆಲಂಗಾಣ ಕಾಂಗ್ರೆಸ್ ನಾಯಕರು ಓವೈಸಿ ತಮ್ಮ ಸ್ವಂತ ರಾಜ್ಯದಲ್ಲಿ ಎಷ್ಟು ‘ಅಬ್ದುಲ್’ಗಳನ್ನು ಜನಪ್ರತಿನಿಧಿಗಳನ್ನಾಗಿ ಮಾಡಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಕೌಂಟರ್ ಅಟ್ಯಾಕ್ ನಡೆಸಿದ್ದಾರೆ. “ಹೈದರಾಬಾದ್ ಸಂಸದೀಯ ಕ್ಷೇತ್ರ 1984 ರಿಂದ ಓವೈಸಿ ಕುಟುಂಬದ ವಶದಲ್ಲೇ ಇದೆ. ‘ದರಿ ಅಬ್ದುಲ್ನದ್ದು, ಕುರ್ಚಿ ಕುಟುಂಬದ್ದು’ (Dari Abdul ki, kursi khandaan ki) ಎಂಬ ವೈಖರಿಯನ್ನು ಓವೈಸಿ ಕೈಬಿಡಲಿ” ಎಂದು ಸವಾಲೆಸೆದಿದ್ದಾರೆ.
ಸ್ವತಂತ್ರ ರಾಜಕೀಯ ನಾಯಕತ್ವ: ಅಲ್ಪಸಂಖ್ಯಾತ ಸಮುದಾಯವು ಬೇರೆ ಪಕ್ಷಗಳ ಮತಬ್ಯಾಂಕ್ ಆಗಿ ಉಳಿಯದೆ ಸ್ವತಂತ್ರ ನಾಯಕತ್ವ ಬೆಳೆಸಿಕೊಳ್ಳಬೇಕು ಎಂಬುದು ಓವೈಸಿ ಅವರ ಪ್ರಮುಖ ಪ್ರತಿಪಾದನೆಯಾಗಿದೆ.
ಪಿಡಿಎ ಮೈತ್ರಿಗೆ ತಿರುಗೇಟು: ಅಖಿಲೇಶ್ ಯಾದವ್ ಅವರ ಪಿಡಿಎ (ಪಿಛಡಾ, ದಲಿತ, ಅಲ್ಪಸಂಖ್ಯಾಕ) ಸೂತ್ರವನ್ನು ಲೇವಡಿ ಮಾಡಿರುವ ಓವೈಸಿ, ಸಮಾಜವಾದಿ ಪಾರ್ಟಿ ‘ಸಮಾಜವಾದಿ ಯಾದವ್ ಪರಿವಾರ್’ ಆಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್-ಎಸ್ಪಿ ಜಂಟಿ ಕೌಂಟರ್: ಓವೈಸಿ ಬಿಜೆಪಿಯ ‘ಬಿ-ಟೀಮ್’ ಆಗಿ ಕೆಲಸ ಮಾಡುತ್ತಿದ್ದು, ಮುಸ್ಲಿಂ ಮತಗಳನ್ನು ವಿಭಜಿಸಿ ಬಿಜೆಪಿ ಗೆಲುವಿಗೆ ನೆರವಾಗುತ್ತಿದ್ದಾರೆ ಎಂದು ವಿಪಕ್ಷ ಮೈತ್ರಿಕೂಟ ಪ್ರತ್ಯಾರೋಪ ಮಾಡಿದೆ.
ಬೆಹಾರಿನ ಸೀಮಾಂಚಲ ಭಾಗದಲ್ಲಿ 5 ಕ್ಷೇತ್ರಗಳನ್ನು ಗೆದ್ದು ಬೀಗುತ್ತಿರುವ ಓವೈಸಿ, ಯುಪಿಯ ಪಶ್ಚಿಮ ಭಾಗದ ಮುಸ್ಲಿಂ ಬಾಹುಳ್ಯ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಆದರೆ, ಯುಪಿ ಚುನಾವಣೆಯಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿ ಗಟ್ಟಿಯಾಗಿರುವುದರಿಂದ ಓವೈಸಿಯ ಈ ‘ಅಬ್ದುಲ್’ ಅಸ್ತ್ರ ಎಷ್ಟರಮಟ್ಟಿಗೆ ಕೆಲಸ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ.





Leave a comment