ದಾವಣಗೆರೆ: ಮುಂಗಾರು ಮಳೆಗಾಲದ ಭತ್ತದ ಬೆಳೆಗೆ ಡ್ಯಾಂನಲ್ಲಿ ಶೇ.90ರಷ್ಟು ನೀರಿದ್ದರೂ ಕಾಲೇಜಿಗೆ ನೀರು ಬಿಡದೆ ದಾವಣಗೆರೆ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಹೆಚ್.ಆರ್. ಲಿಂಗರಾಜ್ ಶಾಮನೂರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ನೀರಾವರಿ ಸಚಿವರ ನಿರ್ಲಕ್ಷ್ಯದಿಂದ ರೈತರಿಗೆ ಆಹಾರ ಧಾನ್ಯ, ದನಕರುಗಳಿಗೆ ಮೇವು ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರು ಸಿಗದೆ ತೊಂದರೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಐಸಿಸಿ (ICC) ಸಭೆ ಕರೆದು ನೀರು ಬಿಡುವ ಬಗ್ಗೆ ತೀರ್ಮಾನಿಸುವುದಾಗಿ ಹೇಳಿ ಸಚಿವರು ರೈತರಿಗೆ ಮೋಸ ಮಾಡಿದ್ದಾರೆ. ತುಂಗಾ ನದಿಯಿಂದ ಮುತ್ತಿನಕೊಪ್ಪದ ಹತ್ತಿರ 17.41 ಟಿಎಂಸಿ ನೀರನ್ನು ಮೇಲ್ದಂಡೆಗೆ ಎತ್ತದೆ, ಭದ್ರಾ ಅಣೆಕಟ್ಟೆಯಿಂದ ವಿಶ್ವೇಶ್ವರಯ್ಯ ಜಲಭಾಗ್ಯ ನಿಗಮಕ್ಕೆ 5.7 ಟಿಎಂಸಿ ಹಾಗೂ ನಂತರ ಪುನಃ 3 ಟಿಎಂಸಿ ನೀರು ಬಿಡಲು ಆದೇಶಿಸಲಾಗಿದೆ. ಈಗ ಮತ್ತೆ 1 ಟಿಎಂಸಿ ನೀರನ್ನು ಮೇಲ್ದಂಡೆಗೆ ಬಿಡಲು ಸರ್ಕಾರ ಸಂಚು ರೂಪಿಸುತ್ತಿದೆ ಎಂದು ಅವರು ದೂರಿದ್ದಾರೆ.
ಭದ್ರಾ ಅಚ್ಚುಕಟ್ಟು ರೈತರ ಹಿತಕಾಪಾಡದೆ ಹಿರಿಯೂರು ಉಪಚುನಾವಣೆಯ ಗಿಮಿಕ್ ಮಾಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಅವರು, ಐಸಿಸಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಬೇಸಿಗೆ ಬೆಳೆಗೆ ಜನವರಿ ಮೊದಲ ವಾರದಲ್ಲೇ 120 ದಿನಗಳ ಕಾಲ ನಾಲೆಗೆ ನೀರು ಬಿಡುಗಡೆ ಮಾಡಲು ಕೂಡಲೇ ತುರ್ತು ಐಸಿಸಿ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ನೀರು ಬಿಡದಿರಲು ಆಕ್ರೋಶ: ಡ್ಯಾಂನಲ್ಲಿ ಶೇ.೯೦ರಷ್ಟು ನೀರಿದ್ದರೂ ಮುಂಗಾರು ಭತ್ತಕ್ಕೆ ನೀರು ನೀಡದೆ ರೈತರು, ದನಕರುಗಳು ಹಾಗೂ ಪ್ರಾಣಿ-ಪಕ್ಷಿಗಳಿಗೆ ತೊಂದರೆ ಉಂಟುಮಾಡಲಾಗಿದೆ.
ಅಪ್ಪರ್ ಭದ್ರಾ ಹಾಗೂ ನಿಗಮದ ಆದೇಶಕ್ಕೆ ವಿರೋಧ: ಭದ್ರಾ ಅಚ್ಚುಕಟ್ಟು ರೈತರನ್ನು ಕಡೆಗಣಿಸಿ ಬೇರೆಡೆಗೆ ನೀರು ಹಂಚಿಕೆ ಮಾಡಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಲಾಗಿದೆ.
ಪ್ರಮುಖ ಬೇಡಿಕೆ: ಬೇಸಿಗೆ ಬೆಳೆಗೆ ಅನುಕೂಲವಾಗುವಂತೆ ಜನವರಿ ಮೊದಲ ವಾರದಲ್ಲೇ ೧೨೦ ದಿನಗಳ ಕಾಲ ನಾಲೆಗೆ ನೀರು ಹರಿಸಲು ತಕ್ಷಣವೇ ತುರ್ತು ಐಸಿಸಿ ಸಭೆ ಕರೆಯಬೇಕು.





Leave a comment