ಬೆಂಗಳೂರು: ಈ ಬಾರಿಯ ಕರ್ನಾಟಕ ರಾಜ್ಯೋತ್ಸವವು ಭಾನುವಾರದ ರಜಾ ದಿನದಂದು ಬಂದಿದ್ದರೂ, ರಾಜ್ಯದ ಎಲ್ಲಾ ಶಾಲೆಗಳಲ್ಲಿ ನವೆಂಬರ್ 1 ರಂದೇ ಕಡ್ಡಾಯವಾಗಿ ಮತ್ತು ಗೌರವಪೂರ್ವಕವಾಗಿ ರಾಜ್ಯೋತ್ಸವವನ್ನು ಆಚರಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ರಜಾ ದಿನ ಎಂಬ ಕಾರಣಕ್ಕೆ ಆಚರಣೆಯನ್ನು ಬೇರೆ ದಿನಕ್ಕೆ ಮುಂದೂಡುವಂತಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಈಗಾಗಲೇ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.
ಸಾಮಾನ್ಯವಾಗಿ ರಜಾ ದಿನದಂದು ಹಬ್ಬ ಬಂದಾಗ ಶಾಲೆಗಳು ಬೇರೆ ದಿನದಂದು ಆಚರಿಸುವ ಸಾಧ್ಯತೆಗಳಿದ್ದವು. ಆದರೆ, ಈ ವಿಷಯ ಗಮನಕ್ಕೆ ಬಂದ ತಕ್ಷಣವೇ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಿಯಮಾನುಸಾರ ನವೆಂಬರ್ 1 ರಂದೇ ನಾಡಹಬ್ಬವನ್ನು ಆಚರಿಸಲು ಸೂಚನೆ ನೀಡಲಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆಯ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಹಾಗೂ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಖಡಕ್ ನಿರ್ದೇಶನ ನೀಡಲಾಗಿದೆ.
ಕಡ್ಡಾಯ ಆಚರಣೆ: ಭಾನುವಾರ ರಜೆಯಿದ್ದರೂ ನವೆಂಬರ್ 1 ರಂದೇ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವುದು ಕಡ್ಡಾಯ.
ಎಲ್ಲಾ ಶಾಲೆಗಳಿಗೂ ಅನ್ವಯ: ಸರ್ಕಾರಿ, ಅನುದಾನಿತ ಹಾಗೂ ಖಾಸಗಿ (ಅನುದಾನ ರಹಿತ) ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಈ ನಿಯಮ ಅನ್ವಯಿಸಲಿದೆ.
ಸಚಿವರ ಕಠಿಣ ಸಂದೇಶ: “ಕನ್ನಡ ರಾಜ್ಯೋತ್ಸವವು ನಮ್ಮ ನಾಡಹಬ್ಬ, ನಮ್ಮ ಹೆಮ್ಮೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ದಿನ. ಈ ಆಚರಣೆಯ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ವಹಿಸುವಂತಿಲ್ಲ” ಎಂದು ಸಚಿವ ಮಧು ಬಂಗಾರಪ್ಪ ಎಚ್ಚರಿಸಿದ್ದಾರೆ.





Leave a comment