ಲಕ್ನೋ: ಉತ್ತರ ಪ್ರದೇಶದ ಲಕ್ನೋದ ನೌಬಸ್ತಾ ಪ್ರದೇಶದಲ್ಲಿ ಕಾರು ನಿಲುಗಡೆ ಹಾಗೂ ದೇವಾಲಯದ ವೇದಿಕೆ ನಿರ್ಮಾಣದ ವಿಚಾರವಾಗಿ ನಡೆದ ದೀರ್ಘಕಾಲದ ಗಲಾಟೆಯ ಹಿನ್ನೆಲೆಯಲ್ಲಿ, ಮಾಜಿ ಮರ್ಚೆಂಟ್ ನೇವೀ ಅಧಿಕಾರಿ ರಿಷಭ್ ಶುಕ್ಲಾ ಎಂಬಾತ ಗುಂಡು ಹಾರಿಸಿ ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೋಮವಾರ ನಡೆದಿದೆ.
ಈ ಅನಿರೀಕ್ಷಿತ ದಾಳಿಯಲ್ಲಿ ನಿವೃತ್ತ ಸಚಿವಾಲಯದ ಉದ್ಯೋಗಿ ಶಿವಾಜಿ ತಿವಾರಿ, ಅವರ ಸಹೋದರ ಶಂಭು ತಿವಾರಿ ಹಾಗೂ ಪುತ್ರ ಸುಯಶ್ ತಿವಾರಿ ಸ್ಥಳದಲ್ಲೇ ಮತ್ತು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಆಲದ ಮರದ ಬಳಿ ಖಾಲಿ ಜಾಗದಲ್ಲಿ ದೇವಾಲಯದ ವೇದಿಕೆ ನಿರ್ಮಾಣದ ವಿಚಾರವಾಗಿ ನೆರೆಹೊರೆಯವರಾದ ತಿವಾರಿ ಕುಟುಂಬ ಹಾಗೂ ಆರೋಪಿ ರಿಷಭ್ ಶುಕ್ಲಾ ನಡುವೆ ಹಿಂದಿನಿಂದಲೂ ವಿವಾದವಿತ್ತು. ಸೋಮವಾರ ತಿವಾರಿ ಕುಟುಂಬದವರು ವೇದಿಕೆ ನಿರ್ಮಾಣದ ಕೆಲಸ ಆರಂಭಿಸಿದಾಗ ಸ್ಥಳಕ್ಕೆ ಬಂದ ರಿಷಭ್ ಶುಕ್ಲಾ, ಮೊದಲು ಕೋಲಿನಿಂದ ಹಲ್ಲೆ ನಡೆಸಿ ನಂತರ ತನ್ನ ಪರವಾನಗಿ ಪಡೆದ ಪಿಚ್ಟೋಲ್ನಿಂದ ಮನಬಂದಂತೆ ಗುಂಡು ಹಾರಿಸಿದ್ದಾನೆ. ಮೃತ ಸುಯಶ್ ತಿವಾರಿ ಅವರ ಮದುವೆ ಮುಂದಿನ ತಿಂಗಳು ನಿಶ್ಚಯವಾಗಿದ್ದು, ಮನೆಯಲ್ಲಿ ಮದುವೆಯ ಸಂಭ್ರಮದ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿರುವುದು ಇಡೀ ಕುಟುಂಬವನ್ನು ಶೋಕಸಮುದ್ರದಲ್ಲಿ ಮುಳುಗಿಸಿದೆ.
ಘಟನೆಯ ಹಿನ್ನೆಲೆ: ಪಾರ್ಕಿಂಗ್ ಹಾಗೂ ದೇವಾಲಯದ ವೇದಿಕೆ ನಿರ್ಮಾಣದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನೆರೆಮನೆಯ ಮಾಜಿ ನೌಕಾ ಅಧಿಕಾರಿಯಿಂದ ಈ ಕೃತ್ಯ ನಡೆದಿದೆ.
ಮೃತರ ವಿವರ: ನಿವೃತ್ತ ನೌಕರ ಶಿವಾಜಿ ತಿವಾರಿ, ಮದುವೆಗೆ ಸಿದ್ಧತೆ ನಡೆಸಿದ್ದ ಪುತ್ರ ಸುಯಶ್ ತಿವಾರಿ ಹಾಗೂ ಸಹೋದರ ಶಂಭು ತಿವಾರಿ ಹತ್ಯೆಗೀಡಾದ ದೌರ್ಭಾಗ್ಯರು.
ಪೊಲೀಸ್ ಕ್ರಮ ಹಾಗೂ ಬಂದೋಬಸ್ತ್: ಹತ್ಯೆಗೈದ ಆರೋಪಿ ರಿಷಭ್ ಶುಕ್ಲಾವನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದು, ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಪೊಲೀಸ್ ಕಮಿಷನರ್ ತರುಣ್ ಗಬಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬದವರನ್ನು ಸಾಂತನಗೊಳಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಹೆಚ್ಚಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಶ್ಚಿಮ ಡಿವಿಸಿಪಿ ಜಿತೇಂದ್ರ ತಿಳಿಸಿದ್ದಾರೆ.





Leave a comment