Home ಕ್ರೈಂ ನ್ಯೂಸ್ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಕೊಲೆ: ಪತ್ನಿ, ಆಕೆಯ ಪ್ರಿಯಕರ ಸೇರಿ ನಾಲ್ವರು ಆರೋಪಿಗಳ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಕೊಲೆ: ಪತ್ನಿ, ಆಕೆಯ ಪ್ರಿಯಕರ ಸೇರಿ ನಾಲ್ವರು ಆರೋಪಿಗಳ ಬಂಧನ!

Share
ಪತ್ನಿ
Share

ಪ್ರತಾಪ್‌ಗಢ: ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪತ್ನಿ ತನ್ನ ಪ್ರಿಯಕರ ಮತ್ತು ಆತನ ಸಹಚರರೊಂದಿಗೆ ಸೇರಿ ಭೀಕರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಕೊಲೆಯಾದ ವ್ಯಕ್ತಿಯನ್ನು ಪ್ರತಾಪ್‌ಗಢದ ಖಾಸ್ ಬಜಾರ್ ನಿವಾಸಿ, ಪಾತ್ರೆ ವ್ಯಾಪಾರಿ ಉಮಾಶಂಕರ್ ಕೌಶಲ್ ಅಲಿಯಾಸ್ ಗುಡ್ಡು (45) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿದಂತೆ ನಾಲ್ವರು ಆರೋಪಿಗಳನ್ನು ಲಾಲ್‌ಗಂಜ್ ಪೊಲೀಸರು ಮತ್ತು ಎಸ್‌ಒಜಿ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

ಬುಧವಾರ ರಾತ್ರಿ ಬೈಕ್‌ನಲ್ಲಿ ಮನೆಯಿಂದ ಹೊರಟಿದ್ದ ಉಮಾಶಂಕರ್ ಗುಡ್ಡು ವಾಪಸ್ ಮನೆಗೆ ಮರಳಿರಲಿಲ್ಲ. ಗುರುವಾರ ಬೆಳಿಗ್ಗೆ ಲಾಲ್‌ಗಂಜ್ ಪ್ರದೇಶದ ಕಾಳಿ ಮಾತಾ ದೇವಾಲಯದ ಸಮೀಪವಿರುವ ಶೀತಲಮೌ ಕಾಲುವೆಯ ಪಕ್ಕದ ತಗ್ಗಿನಲ್ಲಿ ಅವರ ಶವ ಪತ್ತೆಯಾಗಿತ್ತು. ಇಟ್ಟಿಗೆಯಿಂದ ತಲೆ ಮತ್ತು ಎದೆಗೆ ತೀವ್ರವಾಗಿ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಮೃತನ ಸಹೋದರ ದೀಪು ಕೌಶಲ್ ನೀಡಿದ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಜಾಡು ಹಿಡಿದು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಅಕ್ರಮ ಸಂಬಂಧವೇ ಕೊಲೆಗೆ ಕಾರಣ: ಮೃತ ಉಮಾಶಂಕರ್ ಪತ್ನಿ ಸುಮಾನ್ ದೇವಿ ಹಾಗೂ ಧಾರೂಪುರ ನಿವಾಸಿ ಶಹನ್‌ಶಾ ನಡುವೆ ಅನೈತಿಕ ಸಂಬಂಧವಿತ್ತು. ಇದನ್ನು ಉಮಾಶಂಕರ್ ತೀವ್ರವಾಗಿ ವಿರೋಧಿಸಿದ್ದರು.

ಆರೋಪಿಗಳ ಬಂಧನ: ಪತ್ನಿ ಸುಮಾನ್ ದೇವಿ, ಪ್ರಿಯಕರ ಶಹನ್‌ಶಾ, ವಿಶಾಲ್ ಶುಕ್ಲಾ ಅಲಿಯಾಸ್ ಬಿಟ್ಟು ಮತ್ತು ಅವಿನಾಶ್ ತಿವಾರಿ ಅಲಿಯಾಸ್ ರಜತ್ ಬಂಧಿತ ಆರೋಪಿಗಳು.

ಸಾಕ್ಷ್ಯಾಧಾರಗಳ ವಶ: ಆರೋಪಿಗಳಿಂದ ಮೃತನ ಮೊಬೈಲ್ ಫೋನ್ ಹಾಗೂ ಆಧಾರ್ ಕಾರ್ಡ್‌ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಪೊಲೀಸರ ತನಿಖೆಯ ವೇಳೆ ಈ ಹಿಂದೆ ಕೂಡ ಈ ಸಂಬಂಧದ ಗಲಾಟೆಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು ಎಂಬುದು ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಬಂಧಿತ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles