ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಗರ್ಬಾ ನೃತ್ಯ ಕಾರ್ಯಕ್ರಮದ ವೇಳೆ 15 ವರ್ಷದ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಆಕೆಯನ್ನು ಹೊರಗೆ ತಳ್ಳಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ಮಂಡಲ ಅಧ್ಯಕ್ಷ ಕಮಲ್ ಚೌಹಾಣ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಹೀರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಂಕೇಶ್ವರಿ ಗರ್ಬಾ ಉತ್ಸವದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಬೆನ್ನಲ್ಲೇ ತೀವ್ರ ರಾಜಕೀಯ ಸಂಚಲನ ಮೂಡಿಸಿದೆ.
ಕಾರ್ಯಕ್ರಮ ಪ್ರವೇಶಿಸುವ ವಿಚಾರದಲ್ಲಿ ಉಂಟಾದ ಗೊಂದಲದ ವೇಳೆ ಬಿಜೆಪಿ ನಾಯಕ ಕಮಲ್ ಚೌಹಾಣ್ ಬಾಲಕಿಯನ್ನು ಗರ್ಬಾ ಪಂಡಾಲ್ನಿಂದ ಬಲವಂತವಾಗಿ ಹೊರಗೆ ತಳ್ಳಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 74 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಘಟನೆಯ ವಿವರ: ಇಂದೋರ್ನ ಕಂಕೇಶ್ವರಿ ಗರ್ಬಾ ಮೈದಾನದಲ್ಲಿ ಪ್ರವೇಶಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, “ಇಲ್ಲಿಂದ ಹೊರಗೆ ಹೋಗು” ಎಂದು ಬಿಜೆಪಿ ನಾಯಕ ಬಾಲಕಿಯನ್ನು ತಳ್ಳುತ್ತಿರುವ ದೃಶ್ಯ ವೈರಲ್ ಆಗಿದೆ.
ಬಿಜೆಪಿ ನಾಯಕರ ಅಸಮಾಧಾನ: ಘಟನೆ ಬೆನ್ನಲ್ಲೇ ಮಧ್ಯಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಹೇಮಂತ್ ಖಂಡೇಲ್ವಾಲ್ ಸೂಚನೆ ಮೇರೆಗೆ ಕಮಲ್ ಚೌಹಾಣ್ ಅವರನ್ನು ಪಕ್ಷದ ಕಚೇರಿಗೆ ಕರೆಸಿ ಎಚ್ಚರಿಕೆ ನೀಡಲಾಗಿದ್ದು, ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ನಗರ ಅಧ್ಯಕ್ಷರು ತಿಳಿಸಿದ್ದಾರೆ.
ಕಾಂಗ್ರೆಸ್ ತೀವ್ರ ವಾಗ್ದಾಳಿ: ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅದೇ ವೇದಿಕೆಯಲ್ಲಿ ಕನ್ಯಾಪೂಜೆ ನೆರವೇರಿಸಿದ್ದನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಬಿಜೆಪಿ ನಾಯಕರ ನಡೆ ಹಾಗೂ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ವಕ್ತಾರರು ತಕ್ಷಣವೇ ಆರೋಪಿ ಕಮಲ್ ಚೌಹಾಣ್ ಅವರನ್ನು ಮಂಡಲ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿ ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಹಾಗೂ ವೈರಲ್ ವಿಡಿಯೋ ಸಾಕ್ಷ್ಯಗಳನ್ನು ಪೊಲೀಸರು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ.





Leave a comment