ದಾವಣಗೆರೆ: ಸೆಪ್ಟೆಂಬರ್ ಮಾಹೆಯಲ್ಲಿ ದಾವಣಗೆರೆ, ಜಗಳೂರು, ಹೊನ್ನಾಳಿ, ಚನ್ನಗಿರಿ ಹಾಗೂ ಹರಿಹರ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳು, ಬೇಕರಿಗಳು ಮತ್ತು ಹೋಟೆಲ್‌ಗಳಲ್ಲಿ ಸಾರ್ವಜನಿಕರ ದೂರುಗಳ ಆಧಾರದ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಅನಿರೀಕ್ಷಿತ ತಪಾಸಣೆ ನಡೆಸಿದ್ದಾರೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಶುಚಿತ್ವ ಪಾಲನೆಯ ಉದ್ದೇಶದಿಂದ ಜಿಲ್ಲಾದ್ಯಂತ ಒಟ್ಟು 84 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ತಪಾಸಣೆ ವೇಳೆ ನಿಯಮ ಪಾಲಿಸದ ಹೋಟೆಲ್‌ಗಳು ಮತ್ತು ಬೇಕರಿಗಳಿಗೆ ನೋಟೀಸ್ ಜಾರಿಗೊಳಿಸಲಾಗಿದ್ದು, ಸುರಕ್ಷಿತ ಹಾಗೂ ಸ್ವಚ್ಛ ಆಹಾರ ಪದಾರ್ಥಗಳನ್ನು ಮಾತ್ರ ಸಾರ್ವಜನಿಕರಿಗೆ ಪೂರೈಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ದಾವಣಗೆರೆ ನಗರ: ಹೋಟೆಲ್‌ಗಳಿಗೆ ನೋಟೀಸ್ ಜಾರಿ ಮತ್ತು 27 ಆಹಾರ ಮಾದರಿಗಳ ಸಂಗ್ರಹ.
ಹೊನ್ನಾಳಿ ತಾಲ್ಲೂಕು: ಬೇಕರಿ, ಹಾಸ್ಟೆಲ್ ಹಾಗೂ ಬೀದಿ ಬದಿ ಉದ್ಯಮಗಳಿಗೆ ಭೇಟಿ, ನೋಟೀಸ್ ವಿತರಣೆ ಮತ್ತು 19 ಮಾದರಿಗಳ ಸಂಗ್ರಹ.
ಇತರ ತಾಲ್ಲೂಕುಗಳು: ಚನ್ನಗಿರಿ ತಾಲ್ಲೂಕಿನಲ್ಲಿ 18, ಹರಿಹರ ತಾಲ್ಲೂಕಿನಲ್ಲಿ 12 ಹಾಗೂ ಜಗಳೂರು ತಾಲ್ಲೂಕಿನಲ್ಲಿ 8 ಆಹಾರ ಮಾದರಿಗಳ ಸಂಗ್ರಹ.
ಕಡ್ಡಾಯ ನಿಯಮಗಳು: ಎಲ್ಲಾ ಆಹಾರ ತಯಾರಿಕಾ ಘಟಕಗಳಲ್ಲಿ ಶುದ್ಧ ನೀರು ಬಳಕೆ, ಸ್ವಚ್ಛತೆ ಪಾಲನೆ ಹಾಗೂ ಸಿಬ್ಬಂದಿಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯ.
ಬಣ್ಣ ಮತ್ತು ಲೇಬಲಿಂಗ್: ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣಗಳ ಬಳಕೆಗೆ ನಿಷೇಧ ಹಾಗೂ ಸೂಕ್ತ ಲೇಬಲಿಂಗ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ.
ಆಹಾರ ಉದ್ಯಮದಾರರು ಸುರಕ್ಷಿತ ಮತ್ತು ಸ್ವಚ್ಛ ಆಹಾರವನ್ನು ತಯಾರಿಸುವ ಕುರಿತು ಜಾಗೃತಿ ಮೂಡಿಸಲಾಗಿದ್ದು, ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ. ನಾಗರಾಜ್ ಜಿ.ಎಸ್. ತಿಳಿಸಿದ್ದಾರೆ.





Leave a comment