ಝಾನ್ಸಿ: ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿ ಬೇರೆಡೆ ಮದುವೆ ನಿಶ್ಚಯಿಸಿದ್ದರಿಂದ ಕೆರಳಿದ ಪ್ರೇಮಿಯೊಬ್ಬ 19 ವರ್ಷದ ಪ್ರಿಯತಮೆಗೆ ಆಕೆಯ ಮನೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಝಾನ್ಸಿ ನಗರದ ಸಿಪ್ರಿ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಗುಂಡಿನ ಚಕಮಕಿಯ (ಎನ್ಕೌಂಟರ್) ಬಳಿಕ ಬಂಧಿಸಿದ್ದಾರೆ.
ಚಂಚಲ್ ರೈಕ್ವಾರ್ (19) ಕೊಲೆಯಾದ ದುರ್ದೈವಿ ಯುವತಿ. ಈಕೆಯ ಪ್ರೇಮಿ ಕಮಲ್ ರೈಕ್ವಾರ್ ಕೊಲೆ ಎಸಗಿದ ಆರೋಪಿಯಾಗಿದ್ದಾನೆ. ಬುಧವಾರ ಮಧ್ಯಾಹ್ನ ಯುವತಿಯ ಮನೆಯ ಹಿಂಭಾಗದ ಗೋಡೆ ಹತ್ತಿ ಒಳನುಗ್ಗಿದ ಆರೋಪಿ, ಪಿಸ್ತೂಲ್ನಿಂದ ಆಕೆಯ ತಲೆಗೆ ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು.
ನಾಲ್ಕು ವರ್ಷಗಳ ಪ್ರೀತಿ, ವಿರೋಧ: ಕಮಲ್ ಹಾಗೂ ಚಂಚಲ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಯುವತಿಯ ಕುಟುಂಬಸ್ಥರು ಈ ಪ್ರೇಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಬರುವ ಡಿಸೆಂಬರ್ನಲ್ಲಿ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡಲು ನಿಶ್ಚಯಿಸಿದ್ದರು.
ಭೀಕರ ಕೊಲೆ ಮತ್ತು ಪರಾರಿ: ಮದುವೆ ನಿಶ್ಚಯವಾದ ವಿಷಯ ತಿಳಿದು ಆಕ್ರೋಶಗೊಂಡ ಕಮಲ್, ಯುವತಿಯ ಮನೆಗೆ ನುಗ್ಗಿ ಗುಂಡಿಕ್ಕಿದ್ದಾನೆ. ಕೃತ್ಯದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಹೇಳಿರುವ ಆರೋಪಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಕಂಡು ಹೆದರಿ ಸ್ಥಳದಿಂದ ಕಾಲ್ಕಿತ್ತಿದ್ದ.
ಪೋಲಿಸ್ ಎನ್ಕೌಂಟರ್ ಮತ್ತು ಬಂಧನ: ಘಟನೆ ತಿಳಿಯುತ್ತಿದ್ದಂತೆ ನಗರ ಪೊಲೀಸ್ ವರಿಷ್ಠಾಧಿಕಾರಿ (SP) ಪ್ರೀತಿ ಸಿಂಗ್ ನೇತೃತ್ವದಲ್ಲಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಘಟನೆ ನಡೆದ ಐದು ಗಂಟೆಗಳ ಒಳಗೆ ಝಾನ್ಸಿ-ಶಿವಪುರಿ ಹೆದ್ದಾರಿ ಬಳಿ ಆರೋಪಿ ಪತ್ತೆಯಾಗಿದ್ದು, ಆತ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಪಿಸ್ತೂಲ್ ವಶ, ತನಿಖೆ ಚುರುಕು: ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿ ಗುಂಡಿನ ದಾಳಿಯಲ್ಲಿ ಆರೋಪಿಯ ಕಾಲಿಗೆ ಗುಂಡು ತಗಲಿದ್ದು, ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಗೆ ಬಳಸಿದ್ದ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.





Leave a comment