ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಮತ್ತು ಕಲಾವಿದರ ಸಂಚಾರದ ಕುರಿತು ಬಾಲಿವುಡ್ನ ಪ್ರಸಿದ್ಧ ಗಾಯಕ ಮಿಕಾ ಸಿಂಗ್ ನೀಡಿರುವ ಹೇಳಿಕೆಯೊಂದು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ‘ಮಾತು ದಿಲ್ ಸೆ ವಿತ್ ನಾವಿಕಾ ಕುಮಾರ್’ ಪೋಡ್ಕಾಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನಿ ಮುಸ್ಲಿಮರು ಮತ್ತು ದುಬೈ ಮುಸ್ಲಿಮರ ಕುರಿತು ಜನರ ದೃಷ್ಟಿಕೋನವನ್ನು ಪ್ರಶ್ನಿಸಿದ್ದಾರೆ.
ಪಾಕಿಸ್ತಾನಿ ಮುಸ್ಲಿಮರ ಕುರಿತು ಮಿಕಾ ಸಿಂಗ್ ಹೇಳಿದ್ದೇನು?
ಸಂದರ್ಶನದಲ್ಲಿ ಮಾತನಾಡಿದ 50 ವರ್ಷದ ಗಾಯಕ ಮಿಕಾ ಸಿಂಗ್, “ಪಾಕಿಸ್ತಾನ ಕೆಟ್ಟದ್ದಲ್ಲ ಹಾಗೂ ಅಲ್ಲಿನ ಜನರು ಕೂಡ ಕೆಟ್ಟವರಲ್ಲ. ಆದರೆ ನಮಗೇಕೆ ಪಾಕಿಸ್ತಾನದ ಮುಸ್ಲಿಮರು ಕಂಡರೆ ಆಗುವುದಿಲ್ಲ, ಅದೇ ದುಬೈನ ಮುಸ್ಲಿಮರು ಎಂದರೆ ಇಷ್ಟವಾಗುತ್ತಾರೆ ಎಂಬುದು ನನಗೆ ಇದುವರೆಗೂ ಅರ್ಥವಾಗಿಲ್ಲ” ಎಂದು ಹೇಳಿದ್ದಾರೆ.
ಗುರುದ್ವಾರಗಳ ಸೇವೆಯಲ್ಲಿ ಮುಸ್ಲಿಮರ ಪಾತ್ರ:
ತಮ್ಮ ಪಾಕಿಸ್ತಾನ ಭೇಟಿಯನ್ನು ನೆನಪಿಸಿಕೊಂಡ ಮಿಕಾ ಸಿಂಗ್, “ನಾನು ಪಾಕಿಸ್ತಾನಕ್ಕೆ ಹೋದಾಗ ಅಲ್ಲಿನ ಅನೇಕ ಮುಸ್ಲಿಂ ಸಹೋದರರು ಗುರುದ್ವಾರಗಳನ್ನು ಸ್ವಚ್ಛಗೊಳಿಸುವ ಮತ್ತು ನಿರ್ವಹಿಸುವ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ಕಂಡಿದ್ದೇನೆ. ನನ್ಕಾನಾ ಸಾಹಿಬ್ ಮತ್ತು ಪಂಜಾ ಸಾಹಿಬ್ ಸೇರಿದಂತೆ ಅತ್ಯಂತ ಪವಿತ್ರವಾದ ಸಿಖ್ ಧಾರ್ಮಿಕ ಸ್ಥಳಗಳು ಪಾಕಿಸ್ತಾನದಲ್ಲಿವೆ. ನನಗೆ ಅಲ್ಲಿಂದ ಆಹ್ವಾನ ಬಂದಾಗ ಹಣಕ್ಕಿಂತ ಹೆಚ್ಚಾಗಿ ಧಾರ್ಮಿಕ ಸ್ಥಳದ ದರ್ಶನ ಪಡೆಯಬಹುದು ಎಂಬ ಭಾವನೆ ಇತ್ತು” ಎಂದು ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಕಲಾವಿದರ ಪರ ಬ್ಯಾಟಿಂಗ್:
ಬಾಲಿವುಡ್ ಎಂದಿಗೂ ಪಾಕಿಸ್ತಾನಿ ಗಾಯಕರನ್ನು ಮುಕ್ತವಾಗಿ ಸ್ವಾಗತಿಸಿದೆ ಎಂದ ಮಿಕಾ, ಭಾರತೀಯ ಕಲಾವಿದರು ಪಾಕಿಸ್ತಾನಕ್ಕೆ ಹೋಗಿ ಖಾಸಗಿ ಕಾರ್ಯಕ್ರಮ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. “ಅಲ್ಲಿ ಖಾಸಗಿ ಕಾರ್ಯಕ್ರಮ ನೀಡಿ, ಸಂಭಾವನೆ ಪಡೆದು ಮರಳುವುದು ವೃತ್ತಿಪರ ಕೆಲಸ. ಅದನ್ನು ರಹಸ್ಯವಾಗಿ ಮಾಡುವುದಿಲ್ಲ. ನಮ್ಮ ಕಲಾವಿದರಿಗೆ ಪಾಕಿಸ್ತಾನದಲ್ಲಿ ಗೌರವ ಸಿಕ್ಕಾಗ ನಾವು ಸಂತೋಷಪಡಬೇಕು” ಎಂದಿದ್ದಾರೆ.
ಉರಿ ಉಗ್ರರ ದಾಳಿಗಿಂತ ಮುಂಚೆ ತಮಗೆ ಬಂದಿದ್ದ ಆಹ್ವಾನದ ಮೇರೆಗೆ ಕರಾಚಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದಕ್ಕಾಗಿ 2019 ರಲ್ಲಿ ಮಿಕಾ ಸಿಂಗ್ ಅವರ ಮೇಲೆ ಭಾರತೀಯ ಚಲನಚಿತ್ರ ಮಂಡಳಿಗಳು (AICWA ಮತ್ತು FWICE) ನಿಷೇಧ ಹೇರಿದ್ದವು. ಆ ನಂತರ ಅವರು ಬಹಿರಂಗ ಕ್ಷಮೆಯಾಚಿಸಿದ ಬಳಿಕ ನಿಷೇಧ ಹಿಂಪಡೆಯಲಾಗಿತ್ತು. ಪ್ರಸ್ತುತ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
- Bollywood News Kannada
- India Pakistan News
- Mika Singh
- Mika Singh controversy
- Mika Singh Dubai Muslims
- Mika Singh Pakistan statement
- Nankana Sahib Gurdwara
- Navika Kumar podcast
- Pakistani singers in India
- Panja Sahib
- ಗಾಯಕ ಮಿಕಾ ಸಿಂಗ್
- ನನ್ಕಾನಾ ಸಾಹಿಬ್ ಗುರುದ್ವಾರ
- ನಾವಿಕಾ ಕುಮಾರ್ ಪೋಡ್ಕಾಸ್ಟ್
- ಪಾಕಿಸ್ತಾನಿ ಗಾಯಕರು
- ಬಾಲಿವುಡ್ ಸುದ್ದಿ
- ಭಾರತ ಪಾಕಿಸ್ತಾನ ಸಂಬಂಧ
- ಮಿಕಾ ಸಿಂಗ್
- ಮಿಕಾ ಸಿಂಗ್ ದುಬೈ ಮುಸ್ಲಿಂ
- ಮಿಕಾ ಸಿಂಗ್ ಪಾಕಿಸ್ತಾನ ಹೇಳಿಕೆ





Leave a comment