Home ದಾವಣಗೆರೆ ಒಬ್ಬ ಮಹಿಳೆ, 2 ಪಕ್ಷಗಳು, ವಿಭಿನ್ನ ಉಡುಪುಗಳಲ್ಲಿ ಬಂದು 3 ನಾಮಪತ್ರಗಳ ಸಲ್ಲಿಸಿದ ಮಹಿಳಾ ಅಭ್ಯರ್ಥಿ: ಒಂದೇ ಅಭ್ಯರ್ಥಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲ, ಏನಿದು ಕೌತುಕ?
ದಾವಣಗೆರೆನವದೆಹಲಿಬೆಂಗಳೂರು

ಒಬ್ಬ ಮಹಿಳೆ, 2 ಪಕ್ಷಗಳು, ವಿಭಿನ್ನ ಉಡುಪುಗಳಲ್ಲಿ ಬಂದು 3 ನಾಮಪತ್ರಗಳ ಸಲ್ಲಿಸಿದ ಮಹಿಳಾ ಅಭ್ಯರ್ಥಿ: ಒಂದೇ ಅಭ್ಯರ್ಥಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲ, ಏನಿದು ಕೌತುಕ?

Share
ನಾಮಪತ್ರ
Share

ದೀಗ್ (ರಾಜಸ್ಥಾನ): ರಾಜಸ್ಥಾನದ ದೀಗ್ ಜಿಲ್ಲೆಯ ಪಂಚಾಯತ್ ಸಮಿತಿ ಚುನಾವಣೆಯಲ್ಲಿ ವಿಚಿತ್ರ ಹಾಗೂ ಅಚ್ಚರಿಯ ರಾಜಕೀಯ ಸನ್ನಿವೇಶವೊಂದು ವರದಿಯಾಗಿದೆ. ಬ್ರಿಜ್ ನಗರ ಪಂಚಾಯತ್ ಸಮಿತಿಯ ಪ್ರಧಾನ್ (ಅಧ್ಯಕ್ಷೆ) ಸ್ಥಾನಕ್ಕೆ ಸ್ಪರ್ಧಿಸಿದ್ದ ಬಾಟಿ ಕುಮಾರಿ ಗುರ್ಜರ್ ಎಂಬವರು, ಒಮ್ಮೆಯೇ ಕಾಂಗ್ರೆಸ್, ಬಿಜೆಪಿ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಮೂರು ನಾಮಪತ್ರಗಳನ್ನು ಸಲ್ಲಿಸಿ ಅಂತಿಮವಾಗಿ ಬಿಜೆಪಿಯಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಾರ್ಡ್ ನಂ. 14 ರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಬಾಟಿ ಕುಮಾರಿ ಗುರ್ಜರ್, ಪ್ರಧಾನ್ ಹುದ್ದೆಗಾಗಿ ನಾಮಪತ್ರ ಸಲ್ಲಿಸುವಾಗ ವೇಷಭೂಷಣ ಬದಲಾಯಿಸಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್ ನಾಮಪತ್ರ ಸಲ್ಲಿಸಲು ಕೆಂಪು ಸೀರೆಯಲ್ಲಿ, ಬಿಜೆಪಿ ಪರವಾಗಿ ಹಳದಿ ಸೀರೆಯಲ್ಲಿ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಸಲ್ವಾರ್-ಕುರ್ತಾ ಧರಿಸಿ ಬಂದು ನಾಮಪತ್ರ ಸಲ್ಲಿಸಿದ್ದರು. ಈ ವಿಶಿಷ್ಟ ವಿದ್ಯಮಾನವು ರಾಜ್ಯಾದ್ಯಂತ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.

ಮೂರು ನಾಮಪತ್ರಗಳು, ವಿಭಿನ್ನ ಉಡುಪುಗಳು: ಬಾಟಿ ಕುಮಾರಿ ಗುರ್ಜರ್ ಅವರು ಕಾಂಗ್ರೆಸ್ ನಾಯಕ ವಾಜಿಬ್ ಅಲಿ ಹಾಗೂ ಬಿಜೆಪಿ ರಾಜ್ಯ ಸಚಿವ ಜವಾಹರ್ ಸಿಂಗ್ ಬೆಧಮ್ ಅವರೊಟ್ಟಿಗೆ ಬಂದು ಪ್ರತ್ಯೇಕ ನಾಮಪತ್ರಗಳನ್ನು ಸಲ್ಲಿಸುವಾಗ ವಿಭಿನ್ನ ಬಣ್ಣದ ಸೀರೆಗಳನ್ನು ಧರಿಸಿ ಗಮನ ಸೆಳೆದರು.

ಚುನಾವಣಾ ನಿಯಮಗಳ ಅನ್ವಯ ಆಯ್ಕೆ: ಚುನಾವಣಾಧಿಕಾರಿ ದುರ್ಗಾ ಪ್ರಸಾದ್ ಮೀನಾ ಸ್ಪಷ್ಟಪಡಿಸಿದಂತೆ, ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದಾಗ ಅಂತಿಮವಾಗಿ ಪರಿಗಣಿಸಲ್ಪಟ್ಟ ನಾಮಪತ್ರದ ಆಧಾರದ ಮೇಲೆ ಅಭ್ಯರ್ಥಿ ಅಧಿಕೃತಗೊಳ್ಳುತ್ತಾರೆ. ಇದರಂತೆ ಬಿಜೆಪಿಯ ‘ಪದ್ಮ ಚಿಹ್ನೆ’ಯ ಅಡಿಯಲ್ಲಿ ಅವರ ನಾಮಪತ್ರ ಸ್ವೀಕೃತಗೊಂಡಿತು.

ಅವಿರೋಧ ಆಯ್ಕೆ ಹಾಗೂ ಇತರ ಫಲಿತಾಂಶಗಳು: ಇತರೆ ಅಭ್ಯರ್ಥಿಗಳು ಹಿಂದೆ ಸರಿದ ಹಿನ್ನೆಲೆಯಲ್ಲಿ ಬಾಟಿ ಕುಮಾರಿ ಗುರ್ಜರ್ ಅವರು ಬಿಜೆಪಿಯ ಪ್ರಧಾನ್ ಆಗಿ ಅವಿರೋಧವಾಗಿ ಆಯ್ಕೆಯಾದರು. ಇನ್ನು ರಾಜ್ಯದ ಇತರೆಡೆ ನಡೆದ ಉಪ- ಜಿಲ್ಲಾ ಪ್ರಮುಖ್ ಚುನಾವಣೆಯಲ್ಲಿ ಕಾಂಗ್ರೆಸ್ 25 ಮತ್ತು ಬಿಜೆಪಿ 8 ಸ್ಥಾನಗಳನ್ನು ಗೆದ್ದುಕೊಂಡಿವೆ.

Share