ಹಾಸನ: ನಗರದ ಪ್ರಸಿದ್ಧ ದೇವಿಗೆರೆಯಲ್ಲಿ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನೂ ಲೆಕ್ಕಿಸದೆ ಪೆಂಡಾಲ್ ಗಣಪತಿ ಹಾಗೂ ಗೌರಿ ಮೂರ್ತಿಗಳನ್ನು ವಿಸರ್ಜನೆ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶುಭನ್ವಿತಾ ಅವರಿಗೆ ಖಡಕ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಪರಿಸರ ಸಂರಕ್ಷಣೆಗಾಗಿ ವಿಸರ್ಜನೆ ನಿಷೇಧ:
ಹಾಸನ ನಗರದ ನೀರುಬಾಗಿಲು ಆಂಜನೇಯ ದೇವಸ್ಥಾನದ ಪಕ್ಕದಲ್ಲಿರುವ ದೇವಿಗೆರೆ ಆವರಣವು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಗೌರಿ-ಗಣೇಶ ಹಬ್ಬದ ವೇಳೆಯಲ್ಲಿ ಇಲ್ಲಿ ಮೂರ್ತಿ ವಿಸರ್ಜನೆ ಮಾಡುವುದರಿಂದ ನೀರು ರಾಸಾಯನಿಕ ಬಣ್ಣಗಳಿಂದ ಕಲುಷಿತಗೊಂಡು ಜಲಚರಗಳು, ಪರಿಸರ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಮತ್ತು ತಹಶೀಲ್ದಾರ್ ಪ್ರಸ್ತಾವನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಸೆಕ್ಷನ್ 163 ಹಾಗೂ ಜಲ ಕಾಯ್ದೆ 1974ರ ಸೆಕ್ಷನ್ 24ರ ಅಡಿಯಲ್ಲಿ ದೇವಿಗೆರೆಯಲ್ಲಿ ಗೌರಿ-ಗಣಪತಿ ಮೂರ್ತಿ ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ಆದೇಶವನ್ನು ಉಲ್ಲಂಘಿಸಿ ವಿಸರ್ಜನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ, ತಕ್ಷಣ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿತ್ತು.
ಆದೇಶ ಉಲ್ಲಂಘನೆ ಮತ್ತು ಕರ್ತವ್ಯ ಲೋಪ:
ಆದರೆ, ದಿನಾಂಕ 03/10/2026 ರಂದು ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಬಹಿರಂಗವಾಗಿ ಉಲ್ಲಂಘಿಸಿ ಹಾಸನ ನಗರದ ಪೆಂಡಾಲ್ ಗಣಪತಿ ಮತ್ತು ಗೌರಿ ಮೂರ್ತಿಗಳನ್ನು ದೇವಿಗೆರೆಯಲ್ಲಿ ವಿಸರ್ಜನೆ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ ಆಯೋಜಕರು ಅಥವಾ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೊಲೀಸರು ಯಾವುದೇ ಪ್ರಕರಣ ದಾಖಲಿಸದೆ ಮತ್ತು ಸೂಕ್ತ ಕಾನೂನು ಕ್ರಮ ಜರುಗಿಸದೇ ಇರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.
ಈ ಕುರಿತು ನೋಟಿಸ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿಗಳು, ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ಬೇಜವಾಬ್ದಾರಿತನ ತೋರಲಾಗಿದ್ದು, ವಹಿಸಿದ ಕಾರ್ಯವನ್ನು ನಿರ್ವಹಿಸದೇ ಉದ್ಧಟತನ ಪ್ರದರ್ಶಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ನೋಟೀಸ್ ತಲುಪಿದ ತಕ್ಷಣವೇ ಖುದ್ದು ಹಾಜರಾಗಿ ಲಿಖಿತ ವಿವರಣೆ ನೀಡಬೇಕು, ತಪ್ಪಿದಲ್ಲಿ ಶಿಸ್ತು ಕ್ರಮಕ್ಕಾಗಿ ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.





Leave a comment