ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವು ಪ್ರತಿಷ್ಠಿತ ಶಾಲೆಗಳು ಮಕ್ಕಳ ಪ್ರವೇಶಾತಿ ನೀಡುವಾಗ ಉದ್ಯೋಗಸ್ಥ ಮಹಿಳೆಯರಿಗಿಂತ ‘ಗೃಹಿಣಿ’ ತಾಯಂದಿರ ಮಕ್ಕಳಿಗೆ ಆದ್ಯತೆ ನೀಡುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸಾಮಾಜಿಕ ಜಾಲತಾಣ ‘ರೆಡ್ಡಿಟ್’ನಲ್ಲಿ (Reddit) ಪೋಷಕರೊಬ್ಬರು ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರ:
ಬನಶಂಕರಿ ಪ್ರದೇಶದ ನಿವಾಸಿಯಾಗಿರುವ ಪೋಷಕರೊಬ್ಬರು ತಮ್ಮ 2.5 ವರ್ಷದ ಮಗಳಿಗೆ ಸೂಕ್ತ ಶಾಲೆಯನ್ನು ಹುಡುಕುತ್ತಿದ್ದಾಗ ಈ ವಿಷಯ ಬೆಳಕಿಗೆ ಬಂದಿದೆ. ಕೆಲವು ಶಾಲೆಗಳಲ್ಲಿ ತಾಯಿ ಉದ್ಯೋಗದಲ್ಲಿದ್ದರೆ ಪ್ರವೇಶಾತಿ ಅರ್ಜಿಯನ್ನು ತಿರಸ್ಕರಿಸುವ ಅಥವಾ ಪ್ರವೇಶ ನೀಡದಿರುವ ‘ಲಿಖಿತವಲ್ಲದ ನಿಯಮ’ (Unwritten rule) ಜಾರಿಯಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಶಾಲೆಯಲ್ಲಿ ಓದುತ್ತಿರುವ ಇತರ ಮಕ್ಕಳ ಪೋಷಕರನ್ನು ವಿಚಾರಿಸಿದಾಗ, ಇದೊಂದು ಬಹಿರಂಗ ರಹಸ್ಯ (Open secret) ಎಂಬ ವಿಷಯ ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಪ್ರವೇಶಾತಿ ಸಿಗಬೇಕಾದರೆ ಅರ್ಜಿಯಲ್ಲಿ ತಾಯಿ ಕೆಲಸ ಮಾಡುತ್ತಿಲ್ಲವೆಂದು ಸುಳ್ಳು ಮಾಹಿತಿ ನೀಡುವಂತೆ ಇತರ ಪೋಷಕರು ಸಲಹೆ ನೀಡಿದ್ದಾರೆ. ಶಾಲೆಗಳು ಪ್ರತಿ ವರ್ಷ ತಾಯಂದಿರ ಉದ್ಯೋಗದ ಮಾಹಿತಿಯನ್ನು ಪರಿಶೀಲಿಸಿ ನಿಗಾ ವಹಿಸುತ್ತವೆ ಎಂದೂ ಹೇಳಲಾಗಿದೆ.
ಪೋಷಕರ ಮತ್ತು ಸಾರ್ವಜನಿಕರ ಆಕ್ರೋಶ:
“ಆಧುನಿಕ ಹಾಗೂ ತಂತ್ರಜ್ಞಾನದ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಮಹಿಳೆಯರು ಕೆಲಸ ಮಾಡಬಾರದು ಎಂಬ ಮಾನಸಿಕತೆ ಹೊಂದಿರುವ ಸಂಸ್ಥೆಗಳು ಮಕ್ಕಳಿಗೆ ಯಾವ ರೀತಿಯ ಮೌಲ್ಯಗಳನ್ನು ಕಲಿಸಲು ಸಾಧ್ಯ?” ಎಂದು ಪೋಸ್ಟ್ ಮಾಡಿದ ಪೋಷಕರು ಪ್ರಶ್ನಿಸಿದ್ದಾರೆ.
ನೆಟ್ಟಿಗರು ಈ ಪೋಸ್ಟ್‌ಗೆ ಕಮೆಂಟ್ ಮಾಡುವ ಮೂಲಕ, ಇಂತಹ ಅಸಮಾನತೆಯ ನಿಯಮಗಳನ್ನು ಹೊಂದಿರುವ ಶಾಲೆಗಳನ್ನು ಬಹಿರಂಗಪಡಿಸಿ, ಸಂಬಂಧಪಟ್ಟ ಶಿಕ್ಷಣ ಮಂಡಳಿಗೆ ದೂರು ನೀಡುವಂತೆ ಆಗ್ರಹಿಸಿದ್ದಾರೆ.





Leave a comment