Home ದಾವಣಗೆರೆ ನಾನು ಮಾಜಿ ಸಿಎಂ, ಆದರೆ ಚಂದ್ರು ಮಾತ್ರ ರಂಗಭೂಮಿಯ ಶಾಶ್ವತ ‘ಮುಖ್ಯಮಂತ್ರಿ’: ಸಿಎಂ ಸಿದ್ದರಾಮಯ್ಯ ಬಣ್ಣನೆ!
ದಾವಣಗೆರೆಬೆಂಗಳೂರು

ನಾನು ಮಾಜಿ ಸಿಎಂ, ಆದರೆ ಚಂದ್ರು ಮಾತ್ರ ರಂಗಭೂಮಿಯ ಶಾಶ್ವತ ‘ಮುಖ್ಯಮಂತ್ರಿ’: ಸಿಎಂ ಸಿದ್ದರಾಮಯ್ಯ ಬಣ್ಣನೆ!

Share
ಮುಖ್ಯಮಂತ್ರಿ
Share

ಬೆಂಗಳೂರು: “ನಾನು ಎಂಟು ವರ್ಷ ಮುಖ್ಯಮಂತ್ರಿಯಾಗಿದ್ದು, ಈಗ ಮಾಜಿ ಮುಖ್ಯಮಂತ್ರಿಯಾಗಿದ್ದೇನೆ. ಆದರೆ ಚಂದ್ರು ಅವರು ಮಾತ್ರ ಎಂದಿಗೂ ಮಾಜಿ ಆಗಲು ಸಾಧ್ಯವೇ ಇಲ್ಲ. ಅವರು ರಂಗಭೂಮಿಯ ಶಾಶ್ವತ ಮುಖ್ಯಮಂತ್ರಿ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸ್ನೇಹಿತ, ಹಿರಿಯ ನಟ ‘ಮುಖ್ಯಮಂತ್ರಿ’ ಚಂದ್ರು ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕಲಾಗಂಗೋತ್ರಿ’ ತಂಡದ ವತಿಯಿಂದ ಆಯೋಜಿಸಲಾಗಿದ್ದ ಐತಿಹಾಸಿಕ ‘ಮುಖ್ಯಮಂತ್ರಿ’ ನಾಟಕದ 900ನೇ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಅವರು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಚಂದ್ರು ಅವರ ಧರ್ಮಪತ್ನಿ, ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಒಡನಾಡಿಗಳು ಉಪಸ್ಥಿತರಿದ್ದು ಸಂಭ್ರಮಿಸಿದರು.

ರಂಗಭೂಮಿಯ ಸವಾಲು ದೊಡ್ಡದು:

ಸಿನಿಮಾ ಹಾಗೂ ರಂಗಕಲೆಯ ನಡುವಿನ ವ್ಯತ್ಯಾಸವನ್ನು ಹಂಚಿಕೊಂಡ ಮುಖ್ಯಮಂತ್ರಿಗಳು, “ಸಿನಿಮಾದಲ್ಲಿ ಅಭಿನಯಿಸುವಾಗ ನಿರ್ದೇಶಕರಿರುತ್ತಾರೆ. ನಟನೆಯಲ್ಲಿ ಸಣ್ಣ ತಪ್ಪಾದರೂ ‘ಕಟ್’ ಹೇಳಿ ಮತ್ತೊಮ್ಮೆ ರೀಟೇಕ್ ಮಾಡಲು ಅವಕಾಶವಿರುತ್ತದೆ. ಆದರೆ ರಂಗಭೂಮಿಯಲ್ಲಿ ಅಂತಹ ಯಾವುದೇ ಅವಕಾಶವಿಲ್ಲ. ಸಾವಿರಾರು ಪ್ರೇಕ್ಷಕರ ಎದುರು ನೇರವಾಗಿ ನಟಿಸಬೇಕಾಗುತ್ತದೆ, ಇದು ರಂಗಕಲಾವಿದರಿಗೆ ಇರುವ ಸವಾಲು” ಎಂದರು.

 73ರ ಹರೆಯದಲ್ಲೂ ತಗ್ಗದ ಉತ್ಸಾಹ:

“ಮುಖ್ಯಮಂತ್ರಿ ಚಂದ್ರು ಅವರು 93 ನಾಟಕಗಳಲ್ಲಿ ಅಭಿನಯಿಸಿದ್ದು, ಒಂದೊಂದು ನಾಟಕವನ್ನು ಸಿದ್ಧಪಡಿಸಿ ನಟಿಸುವುದು ಅಷ್ಟು ಸುಲಭವಲ್ಲ. ‘ಮುಖ್ಯಮಂತ್ರಿ’ ನಾಟಕ ಒಂದರಲ್ಲೇ 900 ಪ್ರದರ್ಶನ ಪೂರೈಸಿರುವುದು ಅಭೂತಪೂರ್ವ ಸಾಧನೆ. ಸಿನಿಮಾದಲ್ಲೂ ಅವರು 530ಕ್ಕೂ ಹೆಚ್ಚು ಪಾತ್ರಗಳಿಗೆ ಜೀವ ತುಂಬಿದ್ದಾರೆ. 73 ವರ್ಷ ತುಂಬಿದ್ದರೂ ಅವರ ರಂಗ ಉತ್ಸಾಹ ಕಿಂಚಿತ್ತೂ ಕಡಿಮೆಯಾಗಿಲ್ಲ” ಎಂದು ಹೆಮ್ಮೆಯಿಂದ ಸ್ಮರಿಸಿದರು.

ರಾಜಕೀಯ ಹಾಗೂ ಕನ್ನಡ ಸೇವೆ:

“ನಾನು 1983ರಲ್ಲಿ ಶಾಸಕನಾದೆ, ಚಂದ್ರು ಅವರು 1985ರಲ್ಲಿ ಶಾಸಕರಾದರು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಚಂದ್ರು ಅವರನ್ನು ರಾಜಕೀಯಕ್ಕೆ ಕರೆತಂದರು. ಅವರು ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ (MLC) ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಕನ್ನಡದ ಕಹಳೆ ಮೊಳಗಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ” ಎಂದರು.

ಅಂತಿಮವಾಗಿ, ಮುಖ್ಯಮಂತ್ರಿ ಚಂದ್ರು ಅವರಿಗೆ ಭಗವಂತ ಇನ್ನು ಹೆಚ್ಚಿನ ಆಯುಷ್ಯ ಮತ್ತು ಆರೋಗ್ಯ ನೀಡಿ, ಅವರು ಇನ್ನಷ್ಟು ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿ ಅಭಿನಯಿಸುವಂತಾಗಲಿ ಎಂದು ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದರು.

Share

Leave a comment

Leave a Reply

Your email address will not be published. Required fields are marked *

Related Articles