Home ದಾವಣಗೆರೆ ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮರುತನಿಖೆಗೆ ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ ಕರ್ನಾಟಕ ಸರ್ಕಾರ!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮರುತನಿಖೆಗೆ ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ ಕರ್ನಾಟಕ ಸರ್ಕಾರ!

Share
ಸೌಜನ್ಯ
Share

ಬೆಂಗಳೂರು: ದಶಕಕ್ಕೂ ಹೆಚ್ಚು ಕಾಲದಿಂದ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದ ಧರ್ಮಸ್ಥಳದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗೆ ಮಹತ್ವದ ಮರುಜೀವ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ನಿರ್ದೇಶನದ ಬೆನ್ನಲ್ಲೇ, ಕರ್ನಾಟಕ ಸರ್ಕಾರವು ಮರುತನಿಖೆಗಾಗಿ ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ 5 ಸದಸ್ಯರ ನೂತನ ವಿಶೇಷ ತನಿಖಾ ತಂಡವನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.

ಎಸ್‌ಐಟಿಯಲ್ಲಿರುವ ದಕ್ಷ ಅಧಿಕಾರಿಗಳ ವಿವರ:

ಹಿರಿಯ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರ ನೇತೃತ್ವದ ಈ ಪಡೆಗೆ ಐವರು ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ:

ಎನ್. ಶಶಿಕುಮಾರ್ (ಐಜಿಪಿ) – ಎಸ್‌ಐಟಿ ಮುಖ್ಯಸ್ಥರು.

ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ (ಐಪಿಎಸ್) – ಮಂಗಳೂರು ನಗರ ಪೊಲೀಸ್ ಆಯುಕ್ತರು.

ನಿಶಾ ಜೇಮ್ಸ್ (ಐಪಿಎಸ್) – ಎಸ್‌ಪಿ, ರಾಜ್ಯ ಗುಪ್ತಚರ ಇಲಾಖೆ.

ಲೋಕೇಶ್ ಜಗಲಸಾರ್ (ಐಪಿಎಸ್) – ಎಸ್‌ಪಿ, ಸಿಐಡಿ.

ವೆಂಕಟೇಶ್ ಪ್ರಸන්න – ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಅಡಿಷನಲ್ ಎಸ್ಪಿ), ಬೆಂಗಳೂರು ಗ್ರಾಮಾಂತರ ಜಿಲ್ಲೆ.

ಈ ಎಸ್‌ಐಟಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ವಿಶೇಷ ಪೊಲೀಸ್ ಠಾಣೆ ಎಂದು ಘೋಷಿಸಲಾಗಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿದೆ.

ಸುಪ್ರೀಂ ಕೋರ್ಟ್‌ ಚಾಟಿ ಮತ್ತು ಮರುತನಿಖೆಯ ಆದೇಶ:

ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಹಾಗೂ ಸಿಬಿಐ ಸರಿಯಾದ ತನಿಖೆ ನಡೆಸಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು, ಸಿಬಿಐ ನಡೆಸಿದ ತನಿಖೆಯ ವೈಫಲ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಆಧುನಿಕ ತನಿಖಾ ತಂತ್ರಜ್ಞಾನ ಬಲ್ಲ ದಕ್ಷ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚಿಸಿ, ಮೂರು ತಿಂಗಳ ಕಾಲಮಿತಿಯೊಳಗೆ ನೂತನ (De novo) ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಅಲ್ಲದೆ, ಈ ಹಿಂದೆ ಸ್ಥಳೀಯ ಪೊಲೀಸರು, ಸಿಐಡಿ ಹಾಗೂ ಸಿಬಿಐ ತನಿಖೆಯಲ್ಲಿ ಭಾಗಿಯಾಗಿದ್ದ ಯಾವುದೇ ಅಧಿಕಾರಿಯನ್ನು ಹೊಸ ಎಸ್‌ಐಟಿಯಲ್ಲಿ ಸೇರಿಸಬಾರದು ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.

2012ರ ಅಕ್ಟೋಬರ್‌ನಲ್ಲಿ ಬೆಳ್ತಂಗಡಿಯ ಉಜಿರೆ ಸಮೀಪ ನಡೆದಿದ್ದ ಈ ಬರ್ಬರ ಕೃತ್ಯಕ್ಕೆ 14 ವರ್ಷಗಳ ನಂತರ ಮರುತನಿಖೆ ಆರಂಭವಾಗುತ್ತಿದ್ದು, ನೊಂದ ತಾಯಿಯ ಹೋರಾಟಕ್ಕೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ

Share

Leave a comment

Leave a Reply

Your email address will not be published. Required fields are marked *