ಟೆಹ್ರಾನ್/ನವದೆಹಲಿ: ಇರಾನ್‌ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ 19 ವರ್ಷದ ಅವಳಿ ಸಹೋದರಿಯರಾದ ತಾರಾನೆ ರಹೀಮಿ ಹಾಗೂ ರೋಮಿನಾ ರಹೀಮಿ ಅವರ ಮೇಲೆ ಜೈಲಿನಲ್ಲಿ ತೀವ್ರ ರೀತಿಯ ದೈಹಿಕ ಮತ್ತು ಮಾನಸಿಕ ಹಿಂಸಾಚಾರ ಎಸಗಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಇದೀಗ ಇರಾನ್ ನ್ಯಾಯಾಲಯವು ತಾರಾನೆಗೆ ಮರಣದಂಡನೆ ಹಾಗೂ ರೋಮಿನಾಗೆ 27 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ವಿಧಿಸಿದ್ದು, ಈ ಕುಟುಂಬವು ತುರ್ತು ಹಸ್ತಕ್ಷೇಪಕ್ಕಾಗಿ ವಿಶ್ವಸಂಸ್ಥೆಯ ಮೆಟ್ಟಿಲೇರಿದೆ.
ನಾಲ್ಕು ತಿಂಗಳ ಕಾಲ ಪತ್ತೆಯಿರದ ಸಹೋದರಿಯರು:
ಕಳೆದ ಜನವರಿಯಲ್ಲಿ ಇಸ್ಫಹಾನ್ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಈ ಸಹೋದರಿಯರನ್ನು ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕೋರ್ಸ್ (IRGC) ಪಡೆಗಳು ತಡರಾತ್ರಿ ಮನೆಯಿಂದ ಅಪಹರಿಸಿದ್ದವು. ಸುಮಾರು ನಾಲ್ಕು ತಿಂಗಳ ಕಾಲ ತಾಯಿ ಮಾರ್ಜಿಯಾ ಅವರು ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು ಮತ್ತು ಜೈಲುಗಳನ್ನು ಸುತ್ತಿದರೂ ಮಕ್ಕಳ ಸುಳಿವು ಸಿಕ್ಕಿರಲಿಲ್ಲ. ಮೇ ತಿಂಗಳಿನಲ್ಲಿ ಜೈಲಿನಿಂದ ಕರೆ ಬಂದ ಮೇಲಷ್ಟೇ ಅವರು ಜೀವಂತವಾಗಿದ್ದಾರೆ ಎಂಬ ವಿಷಯ ತಿಳಿದುಬಂದಿದೆ.
ಜೈಲಿನಲ್ಲಿ ಅನುಭವಿಸಿದ ನರಕಯಾತನೆ:
ತಾಯಿ ಮಾರ್ಜಿಯಾ ಅವರು ಜೈಲಿನಲ್ಲಿ ತಮ್ಮ ಮಕ್ಕಳನ್ನು ಭೇಟಿಯಾದಾಗ, ಅವರ ಗುರುತೇ ಸಿಗದಷ್ಟು ಮುಖ ಊದಿಕೊಂಡಿತ್ತು, ಕೈ-ಕಾಲುಗಳ ಮೂಳೆಗಳು ಮುರಿದಿದ್ದವು ಮತ್ತು ತಲೆಯ ಕೂದಲುಗಳನ್ನು ಎಳೆದು ಜೈಲಿನಲ್ಲಿ ಎಳೆದೊಯ್ದಿದ್ದರಿಂದ ತಲೆಯ ಭಾಗದಲ್ಲಿದ್ದ ಕೂದಲುಗಳು ಕಿತ್ತುಬಂದಿದ್ದವು. ಏಕಾಂತ ಬಂಧನದಲ್ಲಿದ್ದ ಇವರಿಬ್ಬರಿಗೂ ತೀವ್ರ ದೈಹಿಕ ಶಿಕ್ಷೆ ಮತ್ತು ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಲವಂತದ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲು ಈ ರೀತಿಯ ಭೀಕರ ಹಿಂಸೆ ನೀಡಲಾಗಿದೆ ಎನ್ನಲಾಗಿದೆ.
ವಿಶ್ವಸಂಸ್ಥೆಯ ಮೆಟ್ಟಿಲೇರಿದ ಕುಟುಂಬ:
ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ, ದೈಹಿಕ ಹಿಂಸೆ ನೀಡಿ ಪಡೆದ ಹೇಳಿಕೆಗಳ ಆಧಾರದ ಮೇಲೆ ನ್ಯಾಯಾಲಯವು ತಾರಾನೆಗೆ ಮರಣದಂಡನೆ ವಿಧಿಸಿದೆ. ಈ ಅನ್ಯಾಯದ ವಿರುದ್ಧ ಬ್ರಿಟಿಷ್ ಮಾನವ ಹಕ್ಕುಗಳ ವಕೀಲರ ಮುಖಾಂತರ ಕುಟುಂಬವು ವಿಶ್ವಸಂಸ್ಥೆಗೆ ಮೇಲ್ಮನವಿ ಸಲ್ಲಿಸಿದ್ದು, ತಮ್ಮ ಹೆಣ್ಣುಮಕ್ಕಳಿಗೆ ಜೀವದಾನ ನೀಡುವಂತೆ ಹಾಗೂ ನ್ಯಾಯಯುತ ವಿಚಾರಣೆ ನಡೆಸುವಂತೆ ಜಾಗತಿಕ ಸಮುದಾಯಕ್ಕೆ ಮನವಿ ಮಾಡಿದೆ.
- death sentence Iran
- human rights violation Iran
- Iran protests
- Iran twin sisters
- IRGC torture allegations
- Isfahan protest
- Romina Rahimi
- Taraneh Rahimi
- UN intervention
- World News Kannada
- ಇರಾನ್ ಜೈಲು ಹಿಂಸಾಚಾರ
- ಇರಾನ್ ಪ್ರತಿಭಟನೆ
- ಇಸ್ಫಹಾನ್ ಪ್ರತಿಭಟನೆ
- ಜಾಗತಿಕ ಸುದ್ದಿ
- ಜೈಲು ಶಿಕ್ಷೆ
- ತಾರಾನೆ ರಹೀಮಿ
- ಮರಣದಂಡನೆ ಶಿಕ್ಷೆ
- ಮಾನವ ಹಕ್ಕುಗಳ ಉಲ್ಲಂಘನೆ
- ರೋಮಿನಾ ರಹೀಮಿ
- ವಿಶ್ವಸಂಸ್ಥೆ





Leave a comment