Home ನವದೆಹಲಿ ‘ನನ್ನ ಕುಟುಂಬದಿಂದ ನನ್ನನ್ನು ದೂರ ಮಾಡಲು ಸಂಚು’: ಕೊಮಲ್ ರಾಣಿ ಜೊತೆಗಿನ ವದಂತಿಗಳ ಬಗ್ಗೆ ಮೌನ ಮುರಿದ ನಟ ಗೋವಿಂದ!
ನವದೆಹಲಿಬೆಂಗಳೂರುಸಿನಿಮಾ

‘ನನ್ನ ಕುಟುಂಬದಿಂದ ನನ್ನನ್ನು ದೂರ ಮಾಡಲು ಸಂಚು’: ಕೊಮಲ್ ರಾಣಿ ಜೊತೆಗಿನ ವದಂತಿಗಳ ಬಗ್ಗೆ ಮೌನ ಮುರಿದ ನಟ ಗೋವಿಂದ!

Share
ಗೋವಿಂದ
Share

ಮುಂಬೈ: ನಟ ಗೋವಿಂದ ಹಾಗೂ ಅವರ ಮುಂಬರುವ ‘ರೂಪ’ ಸಿನಿಮಾದ ಸಹ-ನಟಿ ಕೊಮಲ್ ರಾಣಿ ಸ್ವರ್ಣಕರ್ ಅವರ ನಡುವಿನ ಸಂಬಂಧದ ಕುರಿತು ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸ್ವತಃ ಗೋವಿಂದ ಅವರೇ ಪ್ರತಿಕ್ರಿಯಿಸಿದ್ದಾರೆ. ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಗಣಪತಿ ಮಂಟಪಕ್ಕೆ ಕೊಮಲ್ ಜೊತೆ ಭೇಟಿ ನೀಡಿದ ನಂತರ ಎದ್ದಿದ್ದ ವಿವಾದಗಳಿಗೆ ನಟ ಸ್ಪಷ್ಟನೆ ನೀಡಿದ್ದಾರೆ.

ಇದು ನನ್ನ ತೇಜೋವಧೆ ಮಾಡಲು ಮಾಡಿದ ಪ್ಲಾನ್:

ಸುದ್ದಿ ಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ ಗೋವಿಂದ, “ಇದು ಯಾರದ್ದೋ ಒಬ್ಬರ ತಪ್ಪಲ್ಲ, ಇದೊಂದು ಅತ್ಯಂತ ಯೋಜಿತವಾಗಿ ಮಾಡಲಾದ ತಂತ್ರ. ನನ್ನನ್ನು ನನ್ನ ಕುಟುಂಬದಿಂದ ದೂರ ಮಾಡುವುದು ಮತ್ತು ಸಮಾಜದಲ್ಲಿ ನನ್ನ ಹೆಸರನ್ನು ಹಾಳು ಮಾಡುವುದು ಈ ಪ್ಲಾನ್‌ನ ಮುಖ್ಯ ಉದ್ದೇಶವಾಗಿದೆ. ನಾನು ಯಾವಾಗಲೂ ನನ್ನ ಕೆಲಸದ ಮೇಲಷ್ಟೇ ಗಮನ ಹರಿಸಿದ್ದೇನೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಿನಿಮಾಗಾಗಿ ಪೂಜೆ ಸಲ್ಲಿಸಲು ಹೋಗಿದ್ದೆ ಅಷ್ಟೇ:

ಕೊಮಲ್ ರಾಣಿ ಅವರೊಂದಿಗಿನ ಗಾಸಿಪ್‌ಗಳನ್ನು ತಳ್ಳಿಹಾಕಿದ ಗೋವಿಂದ, “ನಾವು ‘ರೂಪ’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ, ನಮ್ಮ ನಡುವೆ ಇರುವುದು ಕೇವಲ ವೃತ್ತಿಪರ ಸಂಬಂಧ. ನಾನು ನನ್ನ ಹೊಸ ಸಿನಿಮಾದ ಯಶಸ್ಸಿಗಾಗಿ ಪ್ರಾರ್ಥಿಸಲು ಲಾಲ್‌ಬಾಗ್‌ಚಾ ರಾಜನ ದರ್ಶನಕ್ಕೆ ಹೋಗಿದ್ದೆ. ಹಿಂದೆ ಕರಿಸ್ಮಾ ಕಪೂರ್ ಹಾಗೂ ರವೀನಾ ಟಂಡನ್ ಅವರೊಂದಿಗೂ ದೇವಸ್ಥಾನಗಳಿಗೆ ತೆರಳಿದ್ದೆ, ಅದು ನನ್ನ ಸಿನಿಮಾಗಳಿಗೆ ಅದೃಷ್ಟ ತಂದಿತ್ತು. ಈಗ ದೀರ್ಘಾವಧಿಯ ನಂತರ ಮತ್ತೆ ಸಿನಿಮಾ ಆರಂಭಿಸುತ್ತಿರುವುದರಿಂದ ಆಶೀರ್ವಾದ ಪಡೆಯಲು ಹೋಗಿದ್ದೆ” ಎಂದಿದ್ದಾರೆ.

ವಿಶೇಷವೆಂದರೆ, ಗೋವಿಂದ ಮತ್ತು ಕೊಮಲ್ ಮಂಟಪಕ್ಕೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಕೂಡ ಅದೇ ಗಣಪತಿ ದರ್ಶನ ಪಡೆದಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸುನೀತಾ, “ಮನುಷ್ಯರಿಗಿಂತ ಪ್ರಾಣಿಗಳನ್ನು ಪ್ರೀತಿಸಿ, ಮನುಷ್ಯರು ಮೋಸಗಾರರು” ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.

ಕಳೆದ ಕೆಲವು ತಿಂಗಳುಗಳಿಂದ ಗೋವಿಂದ ಮತ್ತು ಸುನೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಹರಿದಾಡುತ್ತಿದ್ದು, ಆಗಸ್ಟ್‌ನಲ್ಲಿ ಸುನೀತಾ ಅವರು ನೀಡಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದರು. ಇದೀಗ ಕೊಮಲ್ ರಾಣಿ ಅವರೊಂದಿಗಿನ ಭೇಟಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದ್ದು, ಗೋವಿಂದ ತಮ್ಮ ವಿರುದ್ಧ ಸಂಚು ನಡೆಯುತ್ತಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *