Home ದಾವಣಗೆರೆ ನೆಚ್ಚಿನ ನಟ ‘ಡಿ-ಬಾಸ್’ ದರ್ಶನ್ ತೂಗುದೀಪ ಭೇಟಿಯ ಕನಸು ನನಸಾದ ಬೆನ್ನಲ್ಲೇ ಕಣ್ಣುಮುಚ್ಚಿದ ಅಪ್ಪಟ ಅಭಿಮಾನಿ ಸುದೀಪ್!
ದಾವಣಗೆರೆಬೆಂಗಳೂರುಸಿನಿಮಾ

ನೆಚ್ಚಿನ ನಟ ‘ಡಿ-ಬಾಸ್’ ದರ್ಶನ್ ತೂಗುದೀಪ ಭೇಟಿಯ ಕನಸು ನನಸಾದ ಬೆನ್ನಲ್ಲೇ ಕಣ್ಣುಮುಚ್ಚಿದ ಅಪ್ಪಟ ಅಭಿಮಾನಿ ಸುದೀಪ್!

Share
ದರ್ಶನ್ ತೂಗುದೀಪ
Share

ಶಿವಮೊಗ್ಗಚಿಕ್ಕವಯಸ್ಸಿನಿಂದಲೂ ನೆಚ್ಚಿನ ನಟನನ್ನು ಒಮ್ಮೆಯಾದರೂ ಕಣ್ಣುಂಬಿಕೊಳ್ಳಬೇಕೆಂಬ ಹಂಬಲದಲ್ಲಿದ್ದ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಕೊಪ್ಪದ ಯುವಕ ಸುದೀಪ್ (26) ಮೂರ್ಛೆರೋಗಕ್ಕೆ ಬಲಿಯಾಗುವ ಮೂಲಕ ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದಾರೆ. ನಟ ದರ್ಶನ್ ತೂಗುದೀಪ ಅವರ ಭೇಟಿಯ ಕನಸನ್ನು ಕೊನೆಗೂ ನನಸಾಗಿಸಿಕೊಂಡು ಹೊರಟ ಈ ಯುವಕನ ಕಥೆ ಇಡೀ ಕರುನಾಡನ್ನು ಕಣ್ಣೀರಲ್ಲಿ ಮುಳುಗಿಸಿದೆ.

6ನೇ ತರಗತಿಯಲ್ಲಿದ್ದಾಗಿನಿಂದಲೂ ನಟ ದರ್ಶನ್ ಎಂದರೆ ಸುದೀಪ್‌ಗೆ ಅಪಾರ ಪ್ರೀತಿ ಹಾಗೂ ಅಭಿಮಾನ. ತಂದೆ ಹಿರಿಯಣ್ಣ ಅವರನ್ನು ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡ ಸುದೀಪ್, ತಾಯಿ ತಾರಾ ಅವರ ಆಶ್ರಯದಲ್ಲಿ ಬಡತನದಲ್ಲೇ ಬೆಳೆದರು. ನೆಚ್ಚಿನ ನಟನನ್ನು ನೋಡಲು ಹಲವು ಬಾರಿ ಬೆಂಗಳೂರಿನ ತೂಗುದೀಪ ನಿವಾಸಕ್ಕೆ ತೆರಳಿದ್ದರೂ ದರ್ಶನ್ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆತ, ಮಣಿಪಾಲ ಮತ್ತು ಮಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ “ನಾನು ಸಾಯುವ ಮುನ್ನ ಒಮ್ಮೆಯಾದರೂ ಡಿ-ಬಾಸ್ ನೋಡಬೇಕು” ಎಂದೇ ಹಂಬಲಿಸುತ್ತಿದ್ದ.

ಕನಸು ನನಸಾದ ಕ್ಷಣ:

ಸುದೀಪ್ ಹಾಗೂ ಆತನ ತಾಯಿಯ ನೋವಿನ ಕುರಿತು ವರದಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವರದಿ ಖುದ್ದು ನಟ ದರ್ಶನ್ ಅವರ ಗಮನಕ್ಕೆ ತಲುಪಿತು. ತಕ್ಷಣವೇ ಸ್ಪಂದಿಸಿದ ದರ್ಶನ್, ಸುದೀಪ್‌ನನ್ನು ಮೈಸೂರಿಗೆ ಕರೆಸಿಕೊಂಡು ಭೇಟಿಯಾದರು. ಅಭಿಮಾನಿಯ ಬೆನ್ನು ತಟ್ಟಿ, ಧೈರ್ಯ ತುಂಬಿ ಆತನ ಜೀವಮಾನದ ಶ್ರೇಷ್ಠ ಆಸೆಯನ್ನು ಈಡೇರಿಸಿದ್ದರು.

ಅಕಾಲಿಕ ಸಾವು:

ನೆಚ್ಚಿನ ನಟನ ದರ್ಶನ ಪಡೆದು ಬದುಕಿನಲ್ಲಿ ಹೊಸ ಭರವಸೆ ಹೊಂದಿದ್ದ ಸುದೀಪ್‌ಗೆ ವಿಧಿ ಬೇರೆಯೇ ದಾರಿ ಹೆಣೆದಿತ್ತು. ಸೆಪ್ಟೆಂಬರ್ 21ರಂದು ಮನೆಯ ಬಳಿ ಇದ್ದಕ್ಕಿದ್ದಂತೆ ಮೂರ್ಛೆರೋಗ ಮರುಕಳಿಸಿ ಬಿದ್ದ ಪರಿಣಾಮ ಸುದೀಪ್ ದುರಂತ ಅಂತ್ಯ ಕಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *