Home ಬೆಂಗಳೂರು ಆರ್ಥಿಕ ಸವಾಲುಗಳ ನಡುವೆಯೂ ಗ್ಯಾರಂಟಿ ಯೋಜನೆಗಳು ಬಂದ್ ಆಗಲ್ಲ: ಸರ್ಕಾರದ ಸ್ಪಷ್ಟನೆ
ಬೆಂಗಳೂರುವಾಣಿಜ್ಯ

ಆರ್ಥಿಕ ಸವಾಲುಗಳ ನಡುವೆಯೂ ಗ್ಯಾರಂಟಿ ಯೋಜನೆಗಳು ಬಂದ್ ಆಗಲ್ಲ: ಸರ್ಕಾರದ ಸ್ಪಷ್ಟನೆ

Share
ಆರ್ಥಿಕ
Share

ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಸಾಲದ ಹೊರೆ ಹೆಚ್ಚಾಗಿರುವುದರಿಂದ ಹೊಸ ಯೋಜನೆಗಳನ್ನು ಘೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರ್ಥಿಕ ಇಲಾಖೆಯು ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಆರ್ಥಿಕ ಇಲಾಖೆಯು ಸರ್ಕಾರದ ಹಿತದೃಷ್ಟಿಯಿಂದ ಸೂಕ್ತ ಸಲಹೆಗಳನ್ನು ನೀಡಿದೆ. ಆದರೆ ಹಣಕಾಸಿನ ನಿರ್ವಹಣೆಯಲ್ಲಿ ಯಾವ ಯೋಜನೆಯನ್ನು ಮುಂದುವರಿಸಬೇಕು ಹಾಗೂ ಯಾವುದನ್ನು ನಿಲ್ಲಿಸಬೇಕು ಎಂಬ ಸ್ಪಷ್ಟ ಅರಿವು ನಮಗಿದೆ. ಪ್ರಸ್ತುತ ದಿನಗಳಲ್ಲಿ ನಿತ್ಯಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ ಮತ್ತು ಜನರ ಆದಾಯ ಕುಸಿದಿದೆ. ಹೀಗಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರ ನೆರವಿಗೆ ಧಾವಿಸಲು ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಎಲ್ಲ ಸವಾಲುಗಳ ಮಧ್ಯೆಯೂ ಕರ್ನಾಟಕವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ” ಎಂದು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರಕ್ಕೆ ಅನುದಾನದ ನೆನಪು:

ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಅವರು, “ನಾವು ಅಧಿಕಾರದಲ್ಲಿದ್ದು, ನಾಡಿನ ಜನತೆಗೆ ಏನು ಮಾಡಬೇಕು ಎಂಬ ಹೊಣೆಗಾರಿಕೆ ನಮಗಿದೆ. ಕೇಂದ್ರ ಸರ್ಕಾರವು ಕೇವಲ ರಾಜಕೀಯ ಮಾತುಗಳನ್ನು ಆಡುವುದನ್ನು ಬಿಟ್ಟು ರಾಜ್ಯಕ್ಕೆ ಬರಬೇಕಾದ ತೆರಿಗೆ ಹಾಗೂ ಯೋಜನೆಗಳ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಲಿ. ಹಿಂದೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ₹5,300 ಕೋಟಿ ಅನುದಾನವನ್ನು ಮೊದಲು ಬಿಡುಗಡೆ ಮಾಡಲಿ” ಎಂದು ಆಗ್ರಹಿಸಿದರು.

HDK ವಿರುದ್ಧ ವಾಗ್ದಾಳಿ:

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಸಾಲ ಮನ್ನಾ ಹೇಳಿಕೆ ಕುರಿತು ಪ್ರತಿಕ್ರಿಯಿಸುತ್ತಾ, “ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ಬದ್ಧತೆಯಾಗಿತ್ತು. ಅದು ಕುಮಾರಸ್ವಾಮಿ ಅವರ ಸ್ವಂತ ಚಿಂತನೆಯಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಾವು ಬೆಂಬಲ ನೀಡಿದ್ದರಿಂದಲೇ ಅವರು ಮುಖ್ಯಮಂತ್ರಿಯಾಗಿದ್ದರು. ಆ ಸಮ್ಮಿಶ್ರ ಸರ್ಕಾರಕ್ಕೆ ಅಡಿಪಾಯ ಹಾಕಿದ್ದೇ ಕಾಂಗ್ರೆಸ್” ಎಂದು ಸ್ಪಷ್ಟಪಡಿಸಿದರು.

ಸೌಜನ್ಯ ಪ್ರಕರಣದ ತನಿಖೆ:

ಇದೇ ವೇಳೆ ರಾಜ್ಯದಲ್ಲಿ ಕಾಡುತ್ತಿರುವ ಸೌಜನ್ಯ ಪ್ರಕರಣದ ಮರುತನಿಖೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ, “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ. ಪ್ರಕರಣದ ತನಿಖೆಯಲ್ಲಿ ಸರ್ಕಾರ ಅಥವಾ ಯಾವುದೇ ವ್ಯಕ್ತಿಗಳ ಹಸ್ತಕ್ಷೇಪವಿರುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲೇ ಎಲ್ಲ ತನಿಖೆಗಳು ನಡೆಯಲಿವೆ” ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *