Home ದಾವಣಗೆರೆ ವಂದೇ ಮಾತರಂ ಪೂರ್ಣ ಪಠಣ: ಕೊನೆಯ ಎರಡು ಚರಣಗಳ ಉಚ್ಚಾರಣೆಯಲ್ಲಿ ಬಿಜೆಪಿ ನಾಯಕರು ವಿಫಲ: ಪ್ರಿಯಾಂಕ್ ಖರ್ಗೆ ವ್ಯಂಗ್ಯ
ದಾವಣಗೆರೆಬೆಂಗಳೂರು

ವಂದೇ ಮಾತರಂ ಪೂರ್ಣ ಪಠಣ: ಕೊನೆಯ ಎರಡು ಚರಣಗಳ ಉಚ್ಚಾರಣೆಯಲ್ಲಿ ಬಿಜೆಪಿ ನಾಯಕರು ವಿಫಲ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

Share
ವಂದೇ ಮಾತರಂ
Share

ಬೆಂಗಳೂರು: ಕರ್ನಾಟಕ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಬಿಜೆಪಿ ಶಾಸಕರು ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡುವ ಯತ್ನದಲ್ಲಿ ಎಡವಟ್ಟು ಮಾಡಿಕೊಂಡಿದ್ದು, ಕೊನೆಯ ಎರಡು ಚರಣಗಳ ಪದಗಳ ಉಚ್ಚಾರಣೆಯಲ್ಲಿ ತೀವ್ರವಾಗಿ ಪರದಾಡಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಟುವಾಗಿ ಟೀಕಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವು ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಆದೇಶ ಹೊರಡಿಸಿತ್ತು. ಈ ಆದೇಶವನ್ನು ವಿರೋಧಿಸಿ ಬಿಜೆಪಿ ಶಾಸಕರು ಉಭಯ ಸದನಗಳಲ್ಲಿ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಈ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅವರು ಪೂರ್ಣ ವಂದೇ ಮಾತರಂ ಹಾಡಲು ಪ್ರಯತ್ನಿಸಿದರು. ಆದರೆ ಅವರಿಗೆ ಗೀತೆ ಪೂರ್ತಿಯಾಗಿ ಬರುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾಗದ, ಮೊಬೈಲ್ ಅಥವಾ ಟೆಲಿಪ್ರಾಂಪ್ಟರ್ ನೋಡದೆ ಕೊನೆಯ ಎರಡು ಚರಣಗಳನ್ನು ಹಾಡುವಂತೆ ನಾನು ಸವಾಲು ಹಾಕಿದ್ದೆ. ಇಂದು ಸದನದಲ್ಲಿ ಅವರು ಪದಗಳನ್ನು ಉಚ್ಚರಿಸಲು ಹೆಣಗಾಡುವುದನ್ನು ನೀವೆಲ್ಲರೂ ನೋಡಿದ್ದೀರಿ” ಎಂದು ಹೇಳಿದರು.

ಉಳಿದ ಚರಣಗಳಲ್ಲಿ ಬಂಗಾಳಿ ಪದಗಳು ಹೆಚ್ಚಿರುವುದರಿಂದ ಅವುಗಳನ್ನು ಉಚ್ಚರಿಸುವುದು ಕಷ್ಟಕರ ಎಂದು ಸಮರ್ಥಿಸಿಕೊಂಡ ಅವರು, “ಬಂಕಿಮ್ ಚಂದ್ರ ಚಟರ್ಜಿ ಅವರು ‘ಆನಂದಮಠ’ ಕಾದಂಬರಿಯಲ್ಲಿ ಈ ಗೀತೆಯನ್ನು ಬರೆದಾಗ, ಮೊದಲ ಎರಡು ಚರಣಗಳನ್ನು ಬಿಟ್ಟು ಉಳಿದ ಭಾಗಗಳು ನಂತರ ಸೇರ್ಪಡೆಯಾಗಿವೆ. ಸ್ವಾತಂತ್ರ್ಯ ಹೋರಾಟಗಾರರು ಹಿಂದೂಗಳಾಗಲಿ ಅಥವಾ ಮುಸ್ಲಿಮರಾಗಲಿ, ಮೊದಲ ಎರಡು ಚರಣಗಳಿಂದ ಮಾತ್ರ ಸ್ಫೂರ್ತಿ ಪಡೆದು ಘೋಷಣೆಗಳನ್ನು ಕೂಗುತ್ತಿದ್ದರು. ಹಾಗಾದರೆ ಅಂದು ಬಿಜೆಪಿ ಎಲ್ಲಿತ್ತು?” ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ 13 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಈ ಬಗ್ಗೆ ಧ್ವನಿ ಎತ್ತದ ಬಿಜೆಪಿ, ಈಗ ರಾಜಕೀಯ ಲಾಭಕ್ಕಾಗಿ ವಂದೇ ಮಾತರಂ ವಿಚಾರವನ್ನು ಮುನ್ನೆಲೆಗೆ ತರುತ್ತಿದೆ ಎಂದು ಆರೋಪಿಸಿದ ಖರ್ಗೆ, “ಬಿಜೆಪಿಗೆ ರಾಷ್ಟ್ರೀಯ ಗೀತೆಯ ಮೇಲೆ ನಿಜವಾಗಿಯೂ ಕಾಳಜಿಯಿದ್ದರೆ, ಮೊದಲು ಆರ್​ಎಸ್​ಎಸ್​ ಗೀತೆ ‘ನಮಸ್ತೆ ಸದಾ ವತ್ಸಲೆ’ಯನ್ನು ನಿಲ್ಲಿಸಿ ವಂದೇ ಮಾತರಂ ಅನ್ನು ಅಭ್ಯಾಸ ಮಾಡಲಿ” ಎಂದು ತಿರುಗೇಟು ನೀಡಿದರು.

Share

Leave a comment

Leave a Reply

Your email address will not be published. Required fields are marked *

Related Articles