ಜಮುಯಿ (ಬಿಹಾರ): ಹತ್ತನೇ ತರಗತಿಯ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಅಪ್ರಾಪ್ತೆಯ ಮೇಲೆಯೇ ಲೈಂಗಿಕ ಕಿರುಕುಳ ನೀಡಿದ ಭೀಕರ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದೆ. ಈ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಜಮುಯಿ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.
ಶನಿವಾರ ಸಂಜೆ ಕೋಚಿಂಗ್ ತರಗತಿ ಮುಗಿಸಿ ಸ್ಕೂಟರ್ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಜಮುಯಿ-ಲಖಿಸರಾಯ್ ರಸ್ತೆಯಲ್ಲಿ ಕಾಮುಕರ ಗುಂಪು ಇವರನ್ನು ತಡೆದು ನಿಲ್ಲಿಸಿತ್ತು. ಯುವಕನ ಶರ್ಟ್ ಹಿಡಿದು ಎಳೆದೊಯ್ದ ಆರೋಪಿಗಳು, ಆತನಿಂದ ಯುವತಿಯನ್ನು ಪ್ರತ್ಯೇಕಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ. ಯುವತಿ ಕೈಮುಗಿದು ಅತ್ತರೂ ಬಿಡದೆ ಹಿಂಸಿಸಿದ್ದು, ಕೊನೆಗೆ ವಿದ್ಯಾರ್ಥಿ ಪ್ರತಿರೋಧ ಒಡ್ಡಿ ಆಕೆಯನ್ನು ರಕ್ಷಿಸಿ ಸ್ಥಳದಿಂದ ಪರಾರಿಯಾಗಲು ನೆರವಾಗಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಬಿಹಾರ ಪೊಲೀಸರಿಗೆ ಟ್ಯಾಗ್ ಮಾಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಪ್ರಕರಣದ ತೀವ್ರತೆ ಅರಿತ ಜಮುಯಿ ಎಸ್ಪಿ ವಿಶ್ವಜಿತ್ ದಯಾಳ್, ಸಂತ್ರಸ್ತರನ್ನು ಸಂಪರ್ಕಿಸಿ ವಿಡಿಯೋ ಪರಿಶೀಲಿಸಿ ಮೂವರನ್ನು ಬಂಧಿಸಲಾಗಿದೆ ಹಾಗೂ ಇತರೆ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಖಂಡನೆ:
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದು ಸಂಸ್ಕೃತಿಯಲ್ಲ, ಗಂಡಾಂತರಕಾರಿ ಪುರುಷಪ್ರಧಾನ ಮನಸ್ಥಿತಿ. ಸಾರ್ವಜನಿಕ ರಸ್ತೆಯಲ್ಲಿ ಹೆಣ್ಣುಮಕ್ಕಳಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಬಿಹಾರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ಆರೋಪಿಗಳ ವಿರುದ್ಧ ‘ಪೋಕ್ಸೋ’ (POCSO) ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.





Leave a comment