ಆಂಧ್ರಪ್ರದೇಶ/ಗುಂಟೂರು: ಆಸ್ತಿ ಹಾಗೂ ಚಿನ್ನದ ಆಸೆಗೆ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ದಾರುಣ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೊನ್ನುರು ಪಟ್ಟಣದ ಕ್ಯಾಬಿನ್ಪೇಟೆಯಲ್ಲಿ ನಡೆದಿದೆ. ಮಗಳು ಪುಷ್ಪಲತಾ ಹಾಗೂ ಆಕೆಯ ಮೂರನೇ ಪತಿ ರಾಜ್ಕುಮಾರ್ (ರಾಜಾ) ಸೇರಿ ಈ ಘೋರ ಕೃತ್ಯ ಎಸಗಿದ್ದು, ಪ್ರಸ್ತುತ ಪೊಲೀಸರು ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಕೊಲೆಯಾದ ದುರ್ದೈವಿ ಮಹಿಳೆಯನ್ನು ಲಕ್ಷ್ಮಿ (45) ಎಂದು ಗುರುತಿಸಲಾಗಿದೆ. ಇವರು ಖಾಸಗಿ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದರು. ಲಕ್ಷ್ಮಿಗೆ ಇಬ್ಬರು ಮಕ್ಕಳಿದ್ದು, ಆಕೆಯ ಮಗಳು ಪುಷ್ಪಲತಾಗೆ ಈ ಹಿಂದೆ ಎರಡು ಮದುವೆಗಳಾಗಿದ್ದವು.
ಮೂರು ತಿಂಗಳ ಹಿಂದೆ ಲಕ್ಷ್ಮಿ ಅವರ ಮಗ (ಪುಷ್ಪಲತಾಳ ತಮ್ಮ) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದನು. ಆತನ ಹೆಸರಲ್ಲಿದ್ದ ವಿಮಾ ಪರಿಹಾರದ ಹಣ ಕುಟುಂಬಕ್ಕೆ ಲಭಿಸಿತ್ತು. ಆ ಹಣದಲ್ಲಿ ತಾನು ಗಿರವಿ ಇಟ್ಟಿದ್ದ ಚಿನ್ನದ ಸರವನ್ನು ಲಕ್ಷ್ಮಿ ಬಿಡಿಸಿಕೊಂಡಿದ್ದರು.
ಲಕ್ಷ್ಮಿ ಮನೆಯಲ್ಲಿ ಮಲಗಿದ್ದಾಗ ಪುಷ್ಪಲತಾ ತನ್ನ ಪತಿ ರಾಜ್ಕುಮಾರ್ನೊಂದಿಗೆ ಸೇರಿ ಸೀರೆಯನ್ನು ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ತಾಯಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಬಳಿಕ ಆಕೆಯ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಮನೆಯಲ್ಲಿದ್ದ ನಗದನ್ನು ದೋಚಿ ಪರಾರಿಯಾಗಲು ಯತ್ನಿಸಿದ್ದಾರೆ.
ಈ ಇಡೀ ಘಟನೆಯನ್ನು ಪುಷ್ಪಲತಾಳ 7 ವರ್ಷದ ಮಗ (ಅಜ್ಜಿಯ ಬಳಿ ಬೆಳೆಯುತ್ತಿದ್ದ ಬಾಲಕ) ಕಣ್ಣಾರೆ ಕಂಡಿದ್ದನು. “ಅಮ್ಮ ಮತ್ತು ಬಾಬಾಯಿ ಸೇರಿ ಅಜ್ಜಿಯನ್ನು ಕೊಂದಿದ್ದಾರೆ” ಎಂದು ಆ ಮಗು ಅಕ್ಕಪಕ್ಕದವರಿಗೆ ತಿಳಿಸಿದಾಗ ಈ ದಾರುಣ ಕೃತ್ಯ ಬೆಳಕಿಗೆ ಬಂದಿದೆ.





Leave a comment