ಮುಂಬೈ: ಕರ್ತವ್ಯಕ್ಕೆ ತೆರಳುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ನ 34 ವರ್ಷದ ಕ್ಯಾಬಿನ್ ಕ್ರೂ ಸಿಬ್ಬಂದಿ ಕೈನೂರ್ ಮಿಸ್ತ್ರಿ ಅವರು ಮುಂಬೈನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆಯ ವಿವರ:
ಮುಂಬೈನ ವೆಸ್ಟರ್ನ್ ಎಕ್ಸ್ ಪ್ರೆಸ್ ಹೈವೇಯಲ್ಲಿ ಏರ್‌ಪೋರ್ಟ್ ಕಡೆಗೆ ಪ್ರಯಾಣಿಸುತ್ತಿದ್ದ ಕ್ಯಾಬ್‌ಗೆ, ವಿರುದ್ಧ ದಿಕ್ಕಿನಿಂದ ಅತಿ ವೇಗವಾಗಿ ಬಂದ ಕಾರೊಂದು ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ತೀವ್ರವಾಗಿ ಗಾಯಗೊಂಡ ಮಿಸ್ತಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಅನಾಥವಾಯಿತು ಪುಟ್ಟ ಮಗು:
ಮೃತ ಮಿಸ್ತಿ ಅವರು ಪತಿಯಿಂದ ಬೇರ್ಪಟ್ಟಿದ್ದು, ತಮ್ಮ ಪುಟ್ಟ ಮಗುವಿನ ಜವಾಬ್ದಾರಿಯನ್ನು ಏಕಾಂಗಿಯಾಗಿ ಹೊತ್ತಿದ್ದರು. ಐದು ವರ್ಷದ ಮಗನ ಆಕ್ರಂದನ, ಗೋಳಾಟ, ಕಣ್ಣೀರು ಕರುಳು ಚುರುಕ್ ಎನಿಸುವಂತಿದೆ. ಮಗನ ಉತ್ತಮ ಭವಿಷ್ಯಕ್ಕಾಗಿ ದಿನವಿಡೀ ಶ್ರಮಿಸುತ್ತಿದ್ದ ತಾಯಿ, ಈಗ ಹಿಂತಿರುಗಲಾರದ ಲೋಕಕ್ಕೆ ತೆರಳಿರುವುದು ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಅಜಾಗರೂಕತೆಯ ಹಾಗೂ ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





Leave a comment