ನವದೆಹಲಿ / ಇಂದೋರ್: ದೇಶದಲ್ಲಿ ಮಹಿಳಾ ವಿದ್ಯಾರ್ಥಿನಿಯರಿಗೆ ಸುರಕ್ಷಿತ ಹಾಗೂ ಕೈಗೆಟುಕುವ ಬೆಲೆಯ ವಸತಿನಿಲಯಗಳ ತೀವ್ರ ಕೊರತೆಯಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಮತ್ತು ಸರ್ಕಾರದ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಟೀಕಿಸಿರುವ ಅವರು, “ಸರ್ಕಾರದ ಬಳಿ ದೀಪ ಬೆಳಗಿಸಲು ಹಣವಿದೆ, ಆದರೆ ವಿದ್ಯಾರ್ಥಿನಿಯರ ಹಾಸ್ಟೆಲ್ಗಳಿಗೆ ಹಣವಿಲ್ಲವೇ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಶನಿವಾರ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ‘ಛಾತ್ರೋನ್ ಕೀ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಯುವ ಸಂವಾದ ಕಾರ್ಯಕ್ರಮದ 5ನೇ ಆವೃತ್ತಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿನಿಯ ಅಳಲು ಪ್ರಸ್ತಾಪಿಸಿದ ರಾಹುಲ್:
ಇಂದೋರ್ನಲ್ಲಿ ಗ್ರಾಮದಿಂದ ನಗರಕ್ಕೆ ಓದಲು ಬಂದಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನ ಕಷ್ಟವನ್ನು ಹಂಚಿಕೊಂಡಿದ್ದನ್ನು ರಾಹುಲ್ ಉಲ್ಲೇಖಿಸಿದರು. “ನಗರಗಳಲ್ಲಿ ಸರ್ಕಾರಿ ಹಾಸ್ಟೆಲ್ಗಳಿಲ್ಲದೆ ವಿದ್ಯಾರ್ಥಿನಿಯರು ಖಾಸಗಿ ಪಿಜಿಗಳಲ್ಲಿ (Payers Guest) ಉಳಿದುಕೊಳ್ಳಬೇಕಾಗಿದೆ. ಕೇವಲ ಭದ್ರತೆ ಮತ್ತು ಸುರಕ್ಷತೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗಿದ್ದು, ಪ್ರತಿ ತಿಂಗಳ ಬಾಡಿಗೆ ಮತ್ತು ಮನೆ ಖಾಲಿ ಮಾಡುವ ಭಯದಲ್ಲೇ ವಿದ್ಯಾರ್ಥಿನಿಯರು ವ್ಯಾಸಂಗ ಮಾಡಬೇಕಾಗಿದೆ. ಈ ಆರ್ಥಿಕ ಹೊರೆ ಹಾಗೂ ಸುರಕ್ಷತೆಯ ಅಭಾವದಿಂದಾಗಿಯೇ ದೇಶದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು ಶಿಕ್ಷಣವನ್ನು ಅರ್ಧಕ್ಕೇ ಕೈಬಿಡುತ್ತಿದ್ದಾರೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ ಹೌಸಿಂಗ್ ಅಲೋವೆನ್ಸ್ (ವಸತಿ ಭತ್ಯೆ) ಹಣದುಬ್ಬರಕ್ಕೆ ತಕ್ಕಂತೆ ಏರಿಕೆಯಾಗುತ್ತಿಲ್ಲ ಮತ್ತು ಅದರಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, “ನರೇಂದ್ರ ಮೋದಿ ಅವರೇ, ಈ ಸಣ್ಣ ಹುಡುಗಿಯ ಪ್ರಶ್ನೆಗೆ ನಿಮ್ಮ ಬಳಿ ಉತ್ತರವಿದೆಯೇ?” ಎಂದು ಚಾಟಿ ಬಿದ್ದರು.
ಪ್ರಶ್ನಿಸುವ ವಿದ್ಯಾರ್ಥಿ ಎಂದರೆ ವ್ಯವಸ್ಥೆಗೆ ಭಯ:
‘ವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳು’ ಎಂಬ ವಿಷಯದ ಮೇಲೆ ಮಾತನಾಡಿದ ರಾಹುಲ್ ಗಾಂಧಿ, “ದೇಶದ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯನ್ನು ಕೆಲ ಪ್ರಭಾವಿಗಳು ಹಾಗೂ ಉದ್ಯಮಿಗಳು ನಿಯಂತ್ರಿಸುತ್ತಿದ್ದಾರೆ. ಈ ವ್ಯವಸ್ಥೆಗೆ ಪ್ರಶ್ನೆ ಕೇಳುವ ಜಿಜ್ಞಾಸೆಯುಳ್ಳ ವಿದ್ಯಾರ್ಥಿಗಳೆಂದರೆ ಭಯ. ಅದಕ್ಕಾಗಿಯೇ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಬಯಸದೆ, ಪ್ರಶ್ನಿಸದ ‘ಅಂಧಭಕ್ತರನ್ನು’ ಬಯಸುತ್ತಿದೆ. ಆದರೆ ವಿದ್ಯಾರ್ಥಿಗಳು ಸದಾ ಸತ್ಯ, ಪ್ರೀತಿ ಮತ್ತು ಪ್ರಶ್ನೆಗಳ ಮೂಲಕ ದೇಶವನ್ನು ಮುನ್ನಡೆಸುತ್ತಾರೆ” ಎಂದರು.
ಕಾಂಗ್ರೆಸ್ ನಾಯಕರ ಬೆಂಬಲ: ರಾಹುಲ್ ಗಾಂಧಿ ಅವರ ಹೇಳಿಕೆಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, “ಪಿಆರ್ ತಂತ್ರಗಳು, ಐಷಾರಾಮಿ ಕಾರುಗಳು ಮತ್ತು ಪ್ರಚಾರಕ್ಕೆ ಸರ್ಕಾರದ ಬಳಿ ಹಣವಿದೆ. ಆದರೆ ದೇಶದ ಯುವಕರ ಶಿಕ್ಷಣ, ಗುಣಮಟ್ಟದ ಶಿಕ್ಷಕರು, ತರಬೇತಿ, ಹಾಸ್ಟೆಲ್ ಹಾಗೂ ಉದ್ಯೋಗ ಸೃಷ್ಟಿಗೆ ಹಣವಿಲ್ಲ” ಎಂದು ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.





Leave a comment