Home ದಾವಣಗೆರೆ ಸಿದ್ದರಾಮಯ್ಯ ಸಿಎಂ ಆಗಿರಲಿ ಬಿಡಲಿ, ಅವರೇ ನಮ್ಮ ಎಂದೆಂದೂ ನಾಯಕ: ನಮ್ಮಿಂದಲೇ ಸಹಾಯ ಪಡೆದು ನಮ್ಮ ವಿರುದ್ಧವೇ ಯತ್ನಾಳ್‌ ಮಾತಾಡ್ತಾರೆಂದ್ರು ಸಚಿವ ಎಂ.ಬಿ. ಪಾಟೀಲ್!
ದಾವಣಗೆರೆನವದೆಹಲಿಬೆಂಗಳೂರು

ಸಿದ್ದರಾಮಯ್ಯ ಸಿಎಂ ಆಗಿರಲಿ ಬಿಡಲಿ, ಅವರೇ ನಮ್ಮ ಎಂದೆಂದೂ ನಾಯಕ: ನಮ್ಮಿಂದಲೇ ಸಹಾಯ ಪಡೆದು ನಮ್ಮ ವಿರುದ್ಧವೇ ಯತ್ನಾಳ್‌ ಮಾತಾಡ್ತಾರೆಂದ್ರು ಸಚಿವ ಎಂ.ಬಿ. ಪಾಟೀಲ್!

Share
ಎಂ. ಬಿ. ಪಾಟೀಲ್
Share

ವಿಜಯಪುರ: ಶಾಸಕ ಬಸನ ಗೌಡ ಪಾಟೀಲ ಯತ್ನಾಳರು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು. ಸಿದ್ದರಾಮಯ್ಯರವರು ಮು‍ಖ್ಯಮಂತ್ರಿ ಸ್ಥಾನದಲ್ಲಿ ಇರಲಿ, ಇಲ್ಲದಿರಲಿ ಅವರೇ ನಮ್ಮ ನಾಯಕರು, ಹಿಂದೂ, ಇಂದು, ಎಂದೆಂದೂ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಜಮೀರ್ ಅಹ್ಮದ್ ಖಾನ್, ಸತೀಶ್ ಜಾರಕಿಹೊಳಿ ಮತ್ತು ನಾನು ವಿರೋಧ ವ್ಯಕ್ತಪಡಿಸಿದ್ದೇವೆ, 36 ಶಾಸಕರ ಸಹಿ ಸಂಗ್ರಹಿಸಿದ್ದೇವೆ ಎಂದು ಹೇಳಿರುವುದು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.

ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆಗಾಗಿ ಶಾಸಕರ ಸಹಿ ಸಂಗ್ರಹಿಸುವ ಯಾವುದೇ ಪದ್ಧತಿಯೇ ಇಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಮುಂದುವರಿಯಬೇಕೋ ಬೇಡವೋ ಎಂಬುದು ಕಾಂಗ್ರೆಸ್ ಹೈಕಮಾಂಡ್ಗೆ ಸಂಬಂಧಿಸಿದ ವಿಚಾರ. ಈ ಬಗ್ಗೆ ಅನಗತ್ಯವಾಗಿ ಯಾರೂ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಉನ್ನತ ನಾಯಕರು. ಹಿಂದೆಯೂ, ಇಂದು ಹಾಗೂ ಮುಂದೆಯೂ ಇವರಿಬ್ಬರೂ ನಮ್ಮ ನಾಯಕರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರಲಿ, ಆಗದೇ ಇರಲಿ, ಅವರ ಮೇಲಿನ ನಮ್ಮ ಗೌರವ ಮತ್ತು ನಾಯಕತ್ವದ ಸ್ಥಾನದಲ್ಲಿ ಯಾವುದೇ ಬದಲಾವಣೆಯಿಲ್ಲ ಸ್ವತಃ ರಾಹುಲ್ ಗಾಂಧಿಯವರೇ ಸಿದ್ದರಾಮಯ್ಯ ಅವರನ್ನು ಕರೆಯಿಸಿಕೊಂಡು ಮಾತನಾಡಿದ್ದಾರೆ. ಚುನಾವಣಾ ರಾಜಕೀಯದಿಂದ ಸಿದ್ದರಾಮಯ್ಯ ಅವರು ಹಿಂದೆ ಸರಿಯಬಾರದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಯತ್ನಾಳ ಅವರು ತಮ್ಮ ಬಾಯಿಗೆ ಬಂದಂತೆ ಮಾತನಾಡಿ ಪಕ್ಷದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ,

ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಾಜಕೀಯದಲ್ಲಿ ಸಣ್ಣಪುಟ್ಟ ಮುನಿಸುಗಳು, ಭಿನ್ನಾಭಿಪ್ರಾಯಗಳು ಸಹಜ. ದಾವಣಗೆರೆ ಉಪಚುನಾವಣೆ ವಿಚಾರದಲ್ಲಿ ಜಮೀರ್ ಅಹ್ಮದ್ ಖಾನ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಗೊಂದಲ ಉಂಟಾಗಿದ್ದು ನಿಜ. ಆದರೆ ಅದನ್ನು ಪಕ್ಷದೊಳಗಿನ ಶಾಶ್ವತ ಭಿನ್ನಾಭಿಪ್ರಾಯವೆಂದು ಬಿಂಬಿಸುವುದು ತಪ್ಪು ಎಂದಿದ್ದಾರೆ.

ಯತ್ನಾಳ ಅವರಿಗೆ ಬಾಯಿಗೆ ಬಂದಂತೆ ಮಾತನಾಡುವುದೇ ಚಾಳಿಯಾಗಿದೆ. ಹಿಂದೆ ನನ್ನನ್ನು ಹೊಗಳಿಸಿಕೊಳ್ಳಲು ನಾನೇ ಅವರನ್ನು ಕರೆಯಿಸಿಕೊಂಡಿದ್ದೆ ಎಂದು ಭಾಷಣ ಮಾಡಿದ್ದರು. ನನಗೆ ಯಾರಿಂದಲೂ ಹೊಗಳಿಸಿಕೊಳ್ಳುವ ಖಯಾಲಿ ಇಲ್ಲ. ನಡೆದಾಡುವ ದೇವರು, ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನನ್ನನ್ನು ಹೊಗಳಿರುವ ಮಾತುಗಳೇ ನನಗೆ ನೊಬೆಲ್ ಪ್ರಶಸ್ತಿಗಿಂತಲೂ ದೊಡ್ಡದು ಎಂದು ತಿಳಿಸಿದ್ದಾರೆ.

ಇನ್ನು ಯತ್ನಾಳ ಅವರ ರಾಜಕೀಯ ಇತಿಹಾಸವನ್ನು ಅವರು ಮರೆಯಬಾರದು. ಬಿಜೆಪಿ ತೊರೆದು ಹೊರಬಂದಾಗ ನಾವು ಸೇರಿದಂತೆ ಹಲವರು ಅವರಿಗೆ ಬೆಂಬಲ ನೀಡಿದ್ದೇವೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ನಾವು ಎರಡನೇ ಪ್ರಾಶಸ್ತ್ಯದ ಮತ ನೀಡಿ ಅವರನ್ನು ಗೆಲ್ಲಿಸಿದ್ದೇವೆ. ಆಗ ನಮ್ಮ ಬಳಿ ಬಂದು ಸಹಾಯ ಯಾಚಿಸಿದ್ದ ಯತ್ನಾಳ ಅವರು, ಇಂದು ಅದೇ ವಿಚಾರವನ್ನು ಮರೆತು ನಮ್ಮ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬಿ. ಎಸ್. ಯಡಿಯೂರಪ್ಪ ಅವರ ಸಹಾಯದಿಂದ ಅವರು ಬಿಜೆಪಿಗೆ ಮರಳಿದರು. ಅವರ ವಾಪಸಾತಿಗೆ ಜಗದೀಶ್ ಶೆಟ್ಟರ್,ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಎಲ್ಲರ ವಿರೋಧದ ನಡುವೆಯೂ ಯಡಿಯೂರಪ್ಪ ಅವರು ಅವರನ್ನು ಬಿಜೆಪಿಗೆ ಸೇರಿಸಿಕೊಂಡರು. ಆದರೆ ಮುಂದೆ ಅದೇ ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ ಅವರು ತಿರುಗಿಬಿದ್ದರು. ಅವರಂತೆ ನಾನು ರಾಜಕೀಯ ಮಾಡುವುದಿಲ್ಲ. ನಾನು ನನ್ನ ಪಕ್ಷದ ನಾಯಕರನ್ನು ಗೌರವಿಸುತ್ತೇನೆ. ಸಿದ್ದರಾಮಯ್ಯ ಅವರು ನನ್ನ ನಾಯಕರು. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ನಾಯಕರು. ಈ ನಿಲುವು ನಿನ್ನೆ, ಇಂದು, ನಾಳೆಯೂ ಒಂದೇ. ಯತ್ನಾಳ ಅವರು ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ, ಸುಳ್ಳು ಮತ್ತು ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಲು ನಾವು ಬೇರೆ ದಾರಿ ಹಿಡಿಯಬೇಕಾಗುತ್ತದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರಲಿ, ಆಗದೇ ಇರಲಿ – ಅವರೇ ನಮ್ಮ ನಾಯಕರು. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಎಂಬಿ ಪಾಟೀಲ್ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *