ಲೆಮಾಂಟ್:ಧರ್ಮದ ಹೆಸರಿನಲ್ಲಿ ಸಂಘರ್ಷ, ಮತಾಂಧತೆ ಮತ್ತು ಅಸಹಿಷ್ಣುತೆಗಳು ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗುತ್ತಿರುವ ಸಂದರ್ಭದಲ್ಲಿ, ಧರ್ಮಗಳ ವೈವಿಧ್ಯತೆಯೊಳಗಿನ ಆಧ್ಯಾತ್ಮಿಕ ಏಕತೆ ಹಾಗೂ ವಿಶ್ವಮಾನವತೆಯ ಉದಾತ್ತ ಸಂದೇಶವನ್ನು ಸಾರಿದ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಅರ್ಥಪೂರ್ಣ ಶ್ರೀವಾಣಿ ಅಮೆರಿಕದ ಲೆಮಾಂಟ್‌ನಲ್ಲಿ ಮೊಳಗಿತು.
ದಿ ಹಿಂದೂ ಟೆಂಪಲ್ ಆಫ್ ಗ್ರೇಟರ್ ಚಿಕಾಗೋದ ವಿವೇಕಾನಂದ ಸ್ಪಿರಿಚುವಲ್ ಸೆಂಟರ್ ವತಿಯಿಂದ 12-09-26 ಶನಿವಾರ ರ ಸಂಜೆ ಆಯೋಜಿಸಲಾಗಿದ್ದ “Religious Conflicts in the Present World” ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರುಗಳವರು ಆಶೀರ್ವಚನ ದಯಪಾಲಿಸಿ, ಧಾರ್ಮಿಕ ಸಂಘರ್ಷಗಳ ಮೂಲ, ಮಾನವನ ಆಂತರಿಕ ಸಂಘರ್ಷ ಮತ್ತು ವಿಶ್ವಶಾಂತಿಯ ಅಗತ್ಯತೆಯ ಕುರಿತು ಆಳವಾದ ಚಿಂತನೆಯನ್ನು ಮಂಡಿಸಿದರು.
ವಿವೇಕಾನಂದರ ಚಿಕಾಗೋ ವಾಣಿಯಿಂದ ಆರಂಭವಾದ ವೈಚಾರಿಕ ಪಯಣ
“My dear Brothers and Sisters of America” ಎಂಬ ಐತಿಹಾಸಿಕ ಸಂಬೋಧನೆಯ ಮೂಲಕ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ವಿಶ್ವಮಾನವತೆಯ ಹೃದಯವನ್ನು ಗೆದ್ದ ಘಟನೆಯನ್ನು ಸ್ಮರಿಸಿದ ಶ್ರೀ ಜಗದ್ಗುರುಗಳವರು, ಆ ಒಂದು ಸಂಬೋಧನೆಯಲ್ಲಿದ್ದ ಆತ್ಮೀಯತೆ, ಮಾನವೀಯತೆ ಮತ್ತು ವಿಶ್ವಬಂಧುತ್ವದ ಶಕ್ತಿಯನ್ನು ಮನೋಜ್ಞವಾಗಿ ವಿವರಿಸಿದರು.
ಶತಮಾನದ ಹಿಂದೆ ವಿವೇಕಾನಂದರು ನೀಡಿದ ಮತಾಂಧತೆ, ಸಂಕುಚಿತ ಧಾರ್ಮಿಕ ಮನೋಭಾವ ಮತ್ತು ಹಿಂಸೆಯ ವಿರುದ್ಧದ ಎಚ್ಚರಿಕೆ ಇಂದಿನ ಜಗತ್ತಿನಲ್ಲಿಯೂ ಅಷ್ಟೇ ಪ್ರಸ್ತುತವಾಗಿದೆ ಎಂದು ಅವರು ವಿಶ್ಲೇಷಿಸಿದರು.
ಚಿಕಾಗೋದಲ್ಲಿ ವಿವೇಕಾನಂದರು ಮೊಳಗಿಸಿದ ವಿಶ್ವಬಂಧುತ್ವದ ವಾಣಿಯ ನೆಲದಲ್ಲಿಯೇ, ಮತ್ತೊಮ್ಮೆ ಧರ್ಮಸಮನ್ವಯದ ಸಂದೇಶ ಪ್ರತಿಧ್ವನಿಸಿದ್ದು ವಿಶೇಷವಾಗಿತ್ತು.
ಮನುಷ್ಯನ ನಿಜವಾದ ಶತ್ರು ಹೊರಗಿಲ್ಲ; ಅವನೊಳಗೇ ಇದ್ದಾನೆ
ಭಗವದ್ಗೀತೆಯ “ಆತ್ಮೈವ ಆತ್ಮನೋ ಬಂಧುಃ, ಆತ್ಮೈವ ರಿಪುರಾತ್ಮನಃ” ಎಂಬ ಮಹತ್ವದ ಸಂದೇಶವನ್ನು ಆಧರಿಸಿದ ಶ್ರೀ ಜಗದ್ಗುರುಗಳವರು, ಮನುಷ್ಯನ ನಿಜವಾದ ಶತ್ರು ಹೊರಗಿಲ್ಲ; ಅವನೊಳಗಿರುವ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯಗಳೇ ಅವನ ಪತನಕ್ಕೆ ಕಾರಣವಾಗುತ್ತವೆ ಎಂದು ವಿವರಿಸಿದರು.
ವಿಷಯಚಿಂತನೆಯಿಂದ ಆಸಕ್ತಿ, ಆಸಕ್ತಿಯಿಂದ ಕಾಮನೆ, ಕಾಮನೆ ಈಡೇರದಾಗ ಕ್ರೋಧ, ಕ್ರೋಧದಿಂದ ಸಂಮೋಹ, ಸ್ಮೃತಿಭ್ರಂಶ, ಬುದ್ಧಿನಾಶ ಹಾಗೂ ಅಂತಿಮವಾಗಿ ಮನುಷ್ಯನ ಪತನವಾಗುವ ಕ್ರಮವನ್ನು ಭಗವದ್ಗೀತೆಯ 2.62–63ನೇ ಶ್ಲೋಕದ ಹಿನ್ನೆಲೆಯಲ್ಲಿ ಅವರು ವಿಶ್ಲೇಷಿಸಿದರು.
ಹೊರಗಿನ ಶತ್ರುವನ್ನು ಗೆಲ್ಲುವುದಕ್ಕಿಂತ ಮೊದಲು ತನ್ನೊಳಗಿನ ಶತ್ರುಗಳನ್ನು ಗೆಲ್ಲಬೇಕು; ಆತ್ಮನಿಗ್ರಹವೇ ನಿಜವಾದ ಆತ್ಮವಿಜಯ ಎಂಬ ಸಂದೇಶವನ್ನು ಅವರು ಸಾರಿದರು.
ಅರಿಷಡ್ವರ್ಗಗಳನ್ನು ದಮನಿಸುವುದಲ್ಲ; ಪಳಗಿಸುವುದೇ ಬದುಕಿನ ಜಾಣ್ಮೆ
“Action and reaction are equal and opposite” ಎಂಬ ನ್ಯೂಟನ್ನನ ನಿಯಮವನ್ನು ಉಲ್ಲೇಖಿಸಿದ ಶ್ರೀ ಜಗದ್ಗುರುಗಳವರು, ಭೌತಶಾಸ್ತ್ರದ ಈ ನಿಯಮವನ್ನು ಮಾನವ ಮನಸ್ಸಿನ ಕ್ರಿಯೆ–ಪ್ರತಿಕ್ರಿಯೆಗಳಿಗೆ ಅದೇ ರೀತಿಯಲ್ಲಿ ಅನ್ವಯಿಸಲಾಗದು ಎಂದರು.
ಮನುಷ್ಯನ ಬದುಕಿನಲ್ಲಿ ಕೋಪ, ದ್ವೇಷ ಮತ್ತು ಅಹಂಕಾರಗಳು ಸಣ್ಣ ವಿಚಾರವನ್ನೇ ಹಲವು ಪಟ್ಟು ದೊಡ್ಡ ಸಂಘರ್ಷವನ್ನಾಗಿ ಮಾಡಬಲ್ಲವು ಎಂದು ಅವರು ವಿವರಿಸಿದರು.
ಅರಿಷಡ್ವರ್ಗಗಳನ್ನು ಕೇವಲ ದಮನಿಸುವುದಕ್ಕಿಂತ ಅವುಗಳನ್ನು ಪಳಗಿಸಿ, ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸಿಕೊಳ್ಳುವುದರಲ್ಲಿಯೇ ಬದುಕಿನ ಜಾಣ್ಮೆ ಅಡಗಿದೆ ಎಂದು ಪ್ರತಿಪಾದಿಸಿದ ಅವರು, ಈ ಸಂದರ್ಭದಲ್ಲಿ ವೀರವಿರಾಗಿಣಿ ಅಕ್ಕಮಹಾದೇವಿಯವರ,
“ಹಾವಿನ ಬಾಯ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ!” ವಚನವನ್ನು ಸ್ಮರಿಸಿದರು.
“ಧರ್ಮಗಳು ಹಲವು; ಆಧ್ಯಾತ್ಮಿಕತೆ ಮಾತ್ರ ಒಂದು”
ಶ್ರೀ ಜಗದ್ಗುರುಗಳವರ ಆಶೀರ್ವಚನದ ಕೇಂದ್ರಬಿಂದು ಧಾರ್ಮಿಕ ಸಮನ್ವಯ ಮತ್ತು ಆಧ್ಯಾತ್ಮಿಕ ಏಕತೆಯಾಗಿತ್ತು.
“ಈ ಜಗತ್ತಿಗೆ ದೇವರೊಬ್ಬ; ಅವನ ಹೆಸರು ಅನೇಕ. ಅವನನ್ನು ಅರಿಯಲು ಅನೇಕ ಮಾರ್ಗಗಳಿವೆ. ಅವೇ ವಿವಿಧ ಧರ್ಮಗಳು. ಧರ್ಮಗಳು ವಿಭಿನ್ನವಾದರೂ ಆಧ್ಯಾತ್ಮಿಕತೆ ಮಾತ್ರ ಒಂದು” ಎಂಬ ತಮ್ಮ ಚಿಂತನೆಯನ್ನು ಅವರು ಸ್ಪಷ್ಟವಾಗಿ ಪ್ರತಿಪಾದಿಸಿದರು.
ವಿವಿಧ ಧರ್ಮಗಳನ್ನು ಸುಂದರ ಉದ್ಯಾನವನದ ವಿವಿಧ ಹೂಗಳಿಗೆ ಹೋಲಿಸಿದ ಅವರು, ಪ್ರತಿಯೊಂದು ಹೂವಿಗೂ ತನ್ನದೇ ಆದ ಸೌಂದರ್ಯವಿರುವಂತೆ ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ವೈಶಿಷ್ಟ್ಯವಿದೆ ಎಂದರು.
ತಾನು ಇಷ್ಟಪಟ್ಟ ಹೂವಿನ ಸೌಂದರ್ಯವನ್ನು ಆಸ್ವಾದಿಸುವುದರ ಜೊತೆಗೆ ಇಡೀ ಉದ್ಯಾನವನದ ಸೌಂದರ್ಯವನ್ನೂ ಗೌರವಿಸಬೇಕು. ತನ್ನ ಆಯ್ಕೆಯನ್ನು ಮತ್ತೊಬ್ಬರ ಮೇಲೆ ಬಲವಂತವಾಗಿ ಹೇರಬಾರದು; ಅದೇ ಧಾರ್ಮಿಕ ಸಹಬಾಳ್ವೆಯ ಮೂಲತತ್ತ್ವ ಎಂದು ಅವರು ಪ್ರತಿಪಾದಿಸಿದರು.
“ದಾಳಿಕಾರಂಗೆ ಧರ್ಮವುಂಟೆ?” — ಅಲ್ಲಮನ ಮಾನವೀಯ ಪ್ರಶ್ನೆ
ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ ಶ್ರೀ ಜಗದ್ಗುರುಗಳವರು, ಸ್ವಾಮಿ ವಿವೇಕಾನಂದರ ಮತಾಂಧತೆಯ ಕುರಿತ ಎಚ್ಚರಿಕೆಯನ್ನು ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ಅಲ್ಲಮಪ್ರಭುಗಳವರ, “ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೇ ಹೇಳಾ? ದಾಳಿಕಾರಂಗೆ ಧರ್ಮವುಂಟೆ? ಕನ್ನಗಳ್ಳಂಗೆ ಕರುಳುಂಟೆ? ಗುಹೇಶ್ವರಾ” ಎಂಬ ವಚನವನ್ನು ಸ್ಮರಿಸಿ, ಮಾನವೀಯತೆಯನ್ನು ನಾಶಮಾಡುವ ಹಿಂಸೆಗೆ ಧರ್ಮದ ಹೆಸರನ್ನು ನೀಡುವುದು ಧರ್ಮಕ್ಕೂ ಮಾನವಕುಲಕ್ಕೂ ಮಾಡುವ ಅಪಚಾರ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಧರ್ಮವು ಮನುಷ್ಯನನ್ನು ಮನುಷ್ಯನಿಂದ ದೂರ ಮಾಡುವ ಸಾಧನವಲ್ಲ; ಬದಲಾಗಿ ಮನುಷ್ಯನೊಳಗಿನ ಮಾನವೀಯತೆಯನ್ನು ಜಾಗೃತಗೊಳಿಸುವ ಮಾರ್ಗವಾಗಬೇಕು ಎಂಬ ಸಂದೇಶವನ್ನು ಅವರು ನೀಡಿದರು.
ಭಕ್ತಿ–ಗೌರವದಿಂದ ಜಗದ್ಗುರುಗಳಿಗೆ ಅಮೆರಿಕದ ಭಾರತೀಯರ ನಮನ
ಕಾರ್ಯಕ್ರಮಕ್ಕೆ ಆಗಮಿಸಿದ ದಿ ಹಿಂದೂ ಟೆಂಪಲ್ ಆಫ್ ಗ್ರೇಟರ್ ಚಿಕಾಗೋದ ವಿವೇಕಾನಂದ ಸ್ಪಿರಿಚುವಲ್ ಸೆಂಟರ್‌ನ ಆಯೋಜಕರು, ಶ್ರೀ ತರಳಬಾಳು ಜಗದ್ಗುರುಗಳವರನ್ನು ಅತ್ಯಂತ ಭಕ್ತಿ, ಗೌರವ ಮತ್ತು ಆತ್ಮೀಯತೆಯಿಂದ ಬರಮಾಡಿಕೊಂಡರು.
ಶ್ರೀ ಜಗದ್ಗುರುಗಳವರ ವೈಚಾರಿಕ ಪ್ರೌಢಿಮೆ, ಆಧ್ಯಾತ್ಮಿಕ ದೃಷ್ಟಿಕೋನ ಹಾಗೂ ಸಮಾಜಮುಖಿ ಸೇವಾಕೈಂಕರ್ಯದ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಹೊಂದಿರುವ ಆಯೋಜಕರು, ಹಲವು ವರ್ಷಗಳಿಂದ ಬೆಳೆದುಬಂದಿರುವ ತಮ್ಮ ಆತ್ಮೀಯ ಬಾಂಧವ್ಯವನ್ನು ಈ ಸಂದರ್ಭದಲ್ಲಿ ಅಭಿವ್ಯಕ್ತಪಡಿಸಿದರು.
ಅಮೆರಿಕದ ವಿವಿಧೆಡೆಯಿಂದ ಆಗಮಿಸಿದ್ದ ಭಾರತೀಯರು ಹಾಗೂ ಕನ್ನಡಿಗರೂ ಜಗದ್ಗುರುಗಳವರ ದರ್ಶನ ಪಡೆದು, ಭಕ್ತಿಪೂರ್ವಕವಾಗಿ ನಮಿಸಿ ಆಶೀರ್ವಾದ ಸ್ವೀಕರಿಸಿದರು. ಜಗದ್ಗುರುಗಳವರ ಸಾನ್ನಿಧ್ಯವನ್ನು ಆಧ್ಯಾತ್ಮಿಕ ಭಾಗ್ಯವೆಂದು ಭಾವಿಸಿದ ಭಕ್ತರ ಭಾವಪೂರ್ಣ ಗೌರವ, ಕಾರ್ಯಕ್ರಮದ ಗಂಭೀರತೆಗೆ ವಿಶೇಷ ಮೆರುಗು ನೀಡಿತು.
ಜಗದ್ಗುರುಗಳವರ ಆಗಮನದ ಸಂದರ್ಭದಲ್ಲಿ ಆಯೋಜಕರು ಹಾಗೂ ಭಕ್ತವೃಂದ ತೋರಿದ ಆತ್ಮೀಯತೆ, ಭಾರತೀಯ ಆಧ್ಯಾತ್ಮಿಕ ಪರಂಪರೆಯೊಂದಿಗಿನ ಸಾಗರದಾಚೆಯ ಭಕ್ತಸಮುದಾಯದ ನಂಟಿಗೆ ಸಾಕ್ಷಿಯಾಯಿತು.
ಪ್ರಮುಖರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಅಮೇರಿಕಾ ನಿವಾಸಿಗಳು ಸದ್ಭಕ್ತರಾದ ಶ್ರೀ ಅಣ್ಣಾಪುರ ಶಿವಕುಮಾರ್, ಶ್ರೀಮತಿ ಅನಸೂಯಾ ಶಿವಕುಮಾರ್, ಶ್ರೀ ನಂದೀಶ್ ಧನಂಜಯ,ಡಾ.ಸುಧಾರಾವ್, ಡಾ ಯು.ರೋಹಿಣಿ ಉಡುಪ, ಸೇರಿದಂತೆ ಹಲವು ಪ್ರಮುಖರು, ಆಯೋಜಕರು, ಭಕ್ತರು ಹಾಗೂ ಅಮೆರಿಕದ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಭಾರತೀಯರು ಉಪಸ್ಥಿತರಿದ್ದರು.
ವಿವೇಕಾನಂದರ ನೆಲದಲ್ಲಿ ತರಳಬಾಳಿನ ವಿಶ್ವಮಾನವತೆಯ ಶ್ರೀವಾಣಿ
ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಬಿತ್ತಿದ ವಿಶ್ವಬಂಧುತ್ವ, ಧಾರ್ಮಿಕ ಸಹಿಷ್ಣುತೆ ಮತ್ತು ಮಾನವೀಯತೆಯ ಬೀಜಕ್ಕೆ, ಶ್ರೀ ತರಳಬಾಳು ಜಗದ್ಗುರುಗಳವರ ವೈಚಾರಿಕ ವಾಣಿ ಹೊಸ ಕಾಲಘಟ್ಟದ ಅರ್ಥವ್ಯಾಪ್ತಿಯನ್ನು ನೀಡಿದಂತಾಯಿತು.
ಧರ್ಮಗಳ ವೈವಿಧ್ಯತೆಯನ್ನು ಸಂಘರ್ಷದ ಕಾರಣವನ್ನಾಗಿಸದೆ, ಆಧ್ಯಾತ್ಮಿಕ ಏಕತೆಯ ಸೇತುವೆಯನ್ನಾಗಿ ರೂಪಿಸಬೇಕು; ಹೊರಗಿನ ಶತ್ರುಗಳನ್ನು ಹುಡುಕುವ ಮೊದಲು ತನ್ನೊಳಗಿನ ಅರಿಷಡ್ವರ್ಗಗಳನ್ನು ಜಯಿಸಬೇಕು; ಮಾನವೀಯತೆಯೇ ಧರ್ಮದ ಅಂತಃಸತ್ವ ಎಂಬ ಸಂದೇಶವು ಲೆಮಾಂಟ್‌ನಲ್ಲಿ ಪರಿಣಾಮಕಾರಿಯಾಗಿ ಅನುರಣಿಸಿತು.
ವಿವೇಕಾನಂದರ ಚಿಕಾಗೋ ವಾಣಿಯ ಸ್ಮರಣೆಯೊಂದಿಗೆ ಆರಂಭವಾದ ಈ ವೈಚಾರಿಕ ಪಯಣ, ತರಳಬಾಳು ಜಗದ್ಗುರುಗಳವರ ವಿಶ್ವಮಾನವತೆಯ ಶ್ರೀವಾಣಿಯಲ್ಲಿ ವಿಶ್ವಶಾಂತಿಯ ಆಶಯವಾಗಿ ಮತ್ತಷ್ಟು ವಿಸ್ತಾರಗೊಂಡಿತು.
- Akkamahadevi Vachana
- Allama Prabhu Vachana
- Arishadvarga Bhagavad Gita
- Dr. Shivamurthy Shivacharya Swamiji.
- Hindu Temple of Greater Chicago
- Interfaith Harmony
- Kannada News USA.
- Religious Conflicts in the Present World
- Spiritual Unity
- Taralabalu Jagadguru
- Taralabalu Swamiji Chicago Speech
- Vivekananda Spiritual Center Lemont
- ಅಕ್ಕಮಹಾದೇವಿ ವಚನ
- ಅರಿಷಡ್ವರ್ಗ
- ಅಲ್ಲಮಪ್ರಭು ವಚನ
- ಆಧ್ಯಾತ್ಮಿಕ ಏಕತೆ
- ಚಿಕಾಗೋ ಆಶೀರ್ವಚನ
- ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
- ತರಳಬಾಳು ಜಗದ್ಗುರು
- ಧಾರ್ಮಿಕ ಸಂಘರ್ಷ
- ಲೆಮಾಂಟ್ ಹಿಂದೂ ದೇವಾಲಯ
- ವಿಶ್ವಮಾನವತೆ
- ಶ್ರೀವಾಣಿ.
- ಸ್ವಾಮಿ ವಿವೇಕಾನಂದ ಚಿಕಾಗೋ





Leave a comment