Home ಕ್ರೈಂ ನ್ಯೂಸ್ 2001ರ ಅಮೆರಿಕ ದಾಳಿಯ ಬೆನ್ನಲ್ಲೇ ಬ್ರಿಟನ್ ಸಂಸತ್ತಿನ ಮೇಲೂ ದಾಳಿಗೆ ಸಂಚು ರೂಪಿಸಲಾಗಿತ್ತೇ? ಸ್ಲಂ ನಿವಾಸಿಯಾಗಿದ್ದ ದರ್ಜಿ ಪುತ್ರ ವಿದೇಶದಲ್ಲಿ ಪೈಲಟ್ ತರಬೇತಿ ಪಡೆದದ್ದು ಹೇಗೆ? ಆತ ಬಿಡುಗಡೆಯಾಗಿದ್ದೇಕೆ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

2001ರ ಅಮೆರಿಕ ದಾಳಿಯ ಬೆನ್ನಲ್ಲೇ ಬ್ರಿಟನ್ ಸಂಸತ್ತಿನ ಮೇಲೂ ದಾಳಿಗೆ ಸಂಚು ರೂಪಿಸಲಾಗಿತ್ತೇ? ಸ್ಲಂ ನಿವಾಸಿಯಾಗಿದ್ದ ದರ್ಜಿ ಪುತ್ರ ವಿದೇಶದಲ್ಲಿ ಪೈಲಟ್ ತರಬೇತಿ ಪಡೆದದ್ದು ಹೇಗೆ? ಆತ ಬಿಡುಗಡೆಯಾಗಿದ್ದೇಕೆ?

Share
ಅಮೆರಿಕ
Share

ವಾಷಿಂಗ್ಟನ್: 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಉಗ್ರ ದಾಳಿಯ ನಂತರ, ಇಡೀ ಜಗತ್ತು ಆಘಾತಕ್ಕೊಳಗಾಗಿತ್ತು. ಆದರೆ, ಈ ದಾಳಿಯ ಬೆನ್ನಲ್ಲೇ ಮುಂಬೈ ಪೊಲೀಸರು ಬಂಧಿಸಿದ ವ್ಯಕ್ತಿಯೊಬ್ಬ ನೀಡಿದ ಹೇಳಿಕೆ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು.

ಬಂಧನ ಮತ್ತು ಅನುಮಾನ:

ಅಕ್ಟೋಬರ್ ೨೦೦೧ರಲ್ಲಿ, ಮುಂಬೈನ ಟ್ರೋಂಬೆ ಸಮೀಪದ ಚೀತಾ ಕ್ಯಾಂಪ್ ಎಂಬ ಕೊಳೆಗೇರಿ ನಿವಾಸಿ, ದರ್ಜಿ ಒಬ್ಬರ ಮಗನಾದ ಮೊಹಮ್ಮದ್ ಅಫ್ರೋಜ್ ವಿದೇಶಕ್ಕೆ ತೆರಳಿ ಪೈಲಟ್ ತರಬೇತಿ ಪಡೆದಿರುವ ಬಗ್ಗೆ ಮುಂಬೈ ಪೊಲೀಸರಿಗೆ ರಹಸ್ಯ ಮಾಹಿತಿ ಸಿಕ್ಕಿತ್ತು. ಅತ್ಯಂತ ಬಡ ಕುಟುಂಬದ ಯುವಕನಿಗೆ ವಿದೇಶದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ವಿಮಾನ ಚಾಲನಾ ತರಬೇತಿ ಪಡೆಯಲು ಹಣ ಎಲ್ಲಿಂದ ಬಂತು ಎಂಬ ಅನುಮಾನ ಪೊಲೀಸರಲ್ಲಿ ಮೂಡಿತು.

ತನಿಖೆ ನಡೆಸಿದ ಪೊಲೀಸರು ನವಿ ಮುಂಬೈನ ವಾಶಿಯಲ್ಲಿರುವ ಹೋಟೆಲ್ ಅಬಾಟ್‌ನಲ್ಲಿ ಅಫ್ರೋಜ್‌ನನ್ನು ಬಂಧಿಸಿದರು.

ಬ್ರಿಟಿಷ್ ಸಂಸತ್ತಿನ ಮೇಲೆ ದಾಳಿಯ ಸಂಚು?

ವಿಚಾರಣೆ ವೇಳೆ ಅಫ್ರೋಜ್ ನೀಡಿದ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತು. ಅಲ್-ಖೈದಾ ಉಗ್ರ ಸಂಘಟನೆಯೊಂದಿಗೆ ತನಗೆ ನಂಟಿದ್ದು, ಸೆಪ್ಟೆಂಬರ್ 11ರಂದೇ ಬ್ರಿಟನ್ ಸಂಸತ್ತು ಹಾಗೂ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ರಿಯಾಲ್ಟೋ ಟವರ್ಸ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಆತ ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದರು. ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಮ್ಯಾಂಚೆಸ್ಟರ್‌ಗೆ ಹೋಗುವ ವಿಮಾನವನ್ನು ಹೈಜ್ಯಾಕ್ ಮಾಡಿ ಬ್ರಿಟಿಷ್ ಪಾರ್ಲಿಮೆಂಟ್‌ಗೆ ಅಪ್ಪಳಿಸುವುದು ತನ್ನ ಯೋಜನೆಯಾಗಿತ್ತು, ಆದರೆ ಅಮೆರಿಕ ದಾಳಿಯ ನಂತರ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ ಎಂದು ಆತ ಹೇಳಿಕೊಂಡಿದ್ದ.

ಜಾಗತಿಕ ಮಟ್ಟದ ತನಿಖೆ ಮತ್ತು ಬಿಡುಗಡೆ:

ಘಟನೆಯ ಗಂಭೀರತೆಯನ್ನು ಪರಿಗಣಿಸಿ, ಆಗಿನ ಮುಂಬೈ ಪೊಲೀಸ್ ಕಮಿಷನರ್ ಎಂ.ಎನ್. ಸಿಂಗ್ ನೇತೃತ್ವದ ತಂಡ ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾಗಳಿಗೆ ತೆರಳಿ ತನಿಖೆ ನಡೆಸಿತು. ಆದರೆ, ಅಫ್ರೋಜ್ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ಬಲವಾದ ಆಧಾರಗಳು ಅಥವಾ ಸಾಕ್ಷ್ಯಗಳು ಕೋರ್ಟ್‌ನಲ್ಲಿ ಸಾಬೀತಾಗಲಿಲ್ಲ.

ಅಂತಿಮವಾಗಿ ಆತನ ವಿರುದ್ಧ ಹೊರಿಸಲಾಗಿದ್ದ ‘ಪೋಟಾ’ ಉಗ್ರನಿರೋಧಕ ಕಾಯ್ದೆಯಡಿ ಆರೋಪಗಳನ್ನು ಹಿಂಪಡೆಯಲಾಯಿತು ಮತ್ತು ಆತನನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ನಂತರದ ದಿನಗಳಲ್ಲಿ ಅಫ್ರೋಜ್, ಪೊಲೀಸರು ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದರು ಎಂದು ಪ್ರತಿಪಾದಿಸಿ, ರಾಜಕೀಯದಲ್ಲೂ ಸ್ಪರ್ಧಿಸಿ ವಿಫಲರಾದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles