Home ಕ್ರೈಂ ನ್ಯೂಸ್ ಸೋಷಿಯಲ್ ಮೀಡಿಯಾ ಪೋಸ್ಟ್ ಗಲಾಟೆ: ಈಟಿಯಿಂದ ಚುಚ್ಚಿ, ಹಲ್ಲೆ ನಡೆಸಿ ವ್ಯಾಪಾರಿಯ ಭೀಕರ ಹತ್ಯೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸೋಷಿಯಲ್ ಮೀಡಿಯಾ ಪೋಸ್ಟ್ ಗಲಾಟೆ: ಈಟಿಯಿಂದ ಚುಚ್ಚಿ, ಹಲ್ಲೆ ನಡೆಸಿ ವ್ಯಾಪಾರಿಯ ಭೀಕರ ಹತ್ಯೆ!

Share
ಸೋಷಿಯಲ್ ಮೀಡಿಯಾ
Share

ಗೊಂಡಾ (ಉತ್ತರ ಪ್ರದೇಶ): ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ಸಂಬಂಧಿಸಿದಂತೆ ಉಂಟಾದ ವೈಷಮ್ಯದಿಂದಾಗಿ 45 ವರ್ಷದ ಪಾತ್ರೆ ವ್ಯಾಪಾರಿಯೊಬ್ಬರನ್ನು ಮಾರಕಾಸ್ತ್ರಗಳು ಹಾಗೂ ಈಟಿಯಿಂದಚುಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ರಾಜ್ಯದಲ್ಲಿ ಭಾರಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದು, ಆಡಳಿತಾರೂಢ ಬಿಜೆಪಿ ಮಿತ್ರಪಕ್ಷ ಹಾಗೂ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿವೆ.

ಘಟನೆಯ ವಿವರ:

ಗೊಂಡಾ ಜಿಲ್ಲೆಯ ಪರಸ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೆಕ್ಸಾಡಿಯಾ ನಿವಾಸಿ ವಿನೋದ್ ಕುಮಾರ್ ಸಾಹನಿ (45) ಅವರು ಶಾಹಪುರ ಮಾರುಕಟ್ಟೆಯಲ್ಲಿ ಪಾತ್ರೆ ಅಂಗಡಿ ನಡೆಸುತ್ತಿದ್ದರು. ಬುಧವಾರ ರಾತ್ರಿ ಅಂಗಡಿ ಮುಚ್ಚಿ ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಬಂದ 10 ಜನರ ಗುಂಪು ಅವರನ್ನು ತಡೆದು ನಿಲ್ಲಿಸಿದೆ.

ದಾಳಿಕೋರರು ವಿನೋದ್ ಅವರ ಮೇಲೆ ಈಟಿ ಸೇರಿದಂತೆ ಪ್ರಾಣಾಂತಿಕ ಅಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ದಾಳಿಯ ತೀವ್ರತೆಗೆ ರಕ್ತಸ್ರಾವವಾಗಿ ವಿನೋದ್ ರಸ್ತೆಯಲ್ಲೇ ಕುಸಿದು ಬಿದ್ದಿದ್ದು, ಆತ ಮೃತಪಟ್ಟಿದ್ದಾನೆ ಎಂದು ಭಾವಿಸಿ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಚಿಕಿತ್ಸೆ ಫಲಿಸದೆ ಸಾವು:

ತೀವ್ರ ಗಾಯಗೊಂಡಿದ್ದ ವಿನೋದ್ ಸಾಹನಿ ಅವರನ್ನು ಮೊದಲು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ, ಆನಂತರ ಗೊಂಡಾ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು. ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಲಖನೌದ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ.

ದಾಳಿಯ ಬಳಿಕ ವಿನೋದ್ ಅವರು ನೀಡಿದ್ದ ಹೇಳಿಕೆ ಆಧಾರದ ಮೇಲೆ ಪೊಲೀಸರು ಶುಭಂ ಸಿಂಗ್ ಅಲಿಯಾಸ್ ಗೋಲು, ಸುಭಾಷ್ ಸಿಂಗ್ ಹಾಗೂ ಆಕಾಶ್ ಸಿಂಗ್ ಸೇರಿದಂತೆ 10 ಜನರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ವಿನೋದ್ ಸಾವು ಕಂಡ ಹಿನ್ನೆಲೆಯಲ್ಲಿ ಎಫ್‌ಐಆರ್‌ನಲ್ಲಿ ಕೊಲೆ (Murder) ಪ್ರಕರಣದ ಸೆಕ್ಷನ್ ಸೇರಿಸಲಾಗಿದೆ. ಈಗಾಗಲೇ ಇಬ್ಬರು ಮುಖ್ಯ ಆರೋಪಿಗಳಾದ ಶುಭಂ ಸಿಂಗ್ ಹಾಗೂ ಸುಭಾಷ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಕೀಯ ರಣರಂಗವಾದ ಆಸ್ಪತ್ರೆ ಅಂಗಳ:

ಈ ಭೀಕರ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಮಿತ್ರಪಕ್ಷವಾದ ನಿಷಾದ್ ಪಾರ್ಟಿಯ ಅಧ್ಯಕ್ಷ ಹಾಗೂ ರಾಜ್ಯ ಸಚಿವ ಸಂಜಯ್ ನಿಷಾದ್ ಲಖನೌದ ಆಸ್ಪತ್ರೆಯ ಶವಾಗಾರಕ್ಕೆ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಮಾಜವಾದಿ ಪಾರ್ಟಿಯ ನಾಯಕರೊಂದಿಗೆ ಧರಣಿ ನಡೆಸಿದ ಅವರು, ಘಟನೆಗೆ ಪೋಲೀಸರ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿ ಪರಸ್‌ಪುರ ಠಾಣಾಧಿಕಾರಿ ಹಾಗೂ ಶಾಹಪುರ ಔಟ್‌ಪೋಸ್ಟ್ ಉಸ್ತುವಾರಿಯನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಶೀಘ್ರವೇ ಬಂಧಿಸದಿದ್ದರೆ ಗೊಂಡಾ ಎಸ್‌ಪಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಮತ್ತೊಂದೆಡೆ ಸಮಾಜವಾದಿ ಪಾರ್ಟಿ (SP) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಟ್ವೀಟ್ (X) ಮಾಡಿ, ಮೃತ ವಿನೋದ್ ಸಾಹನಿ ಸಮಾಜವಾದಿ ಪಾರ್ಟಿಯೊಂದಿಗೆ ಗುರುತಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅಪರಾಧ ಮತ್ತು ಅರಾಜಕತೆ ಮಿತಿಮೀರಿದೆ. ಘಟನೆಯ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಸ್ತುತ ಗೊಂಡಾ ಜಿಲ್ಲೆಯಲ್ಲಿ ಬಿಗುವಿನ ವಾತಾವರಣವಿದ್ದು, ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles