ಲಕ್ನೋ / ಹರದೋಯಿ: ಕುಟುಂಬಸ್ಥರ ತೀವ್ರ ವಿರೋಧದ ನಡುವೆಯೂ ಒಂದಾಗಲು ಬಯಸಿ ಊರು ಬಿಟ್ಟು ಓಡಿಬಂದಿದ್ದ ಅನ್ಯಕೋಮಿನ ಪ್ರೇಮಿಗಳಿಬ್ಬರು ಹೋಟೆಲ್ ಕೊಠಡಿಯಲ್ಲಿ ಒಂದೇ ನೇಣು ಹಗ್ಗಕ್ಕೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿರುವ ಅತ್ಯಂತ ದಾರುಣ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಬೆಳಕಿಗೆ ಬಂದಿದೆ.
ಮೃತರನ್ನು ಹರದೋಯಿ ಜಿಲ್ಲೆಯ ಹರಪಾಲ್‌ಪುರ ನಿವಾಸಿ ಅಮಿತ್ ಕುಮಾರ್ (22) ಮತ್ತು ಪಾಲಿಯಾ ಗ್ರಾಮದ ನಿವಾಸಿ ನರ್ಗಿಸ್ ಅಲಿಯಾಸ್ ಪೂಜಾ (19) ಎಂದು ಗುರುತಿಸಲಾಗಿದೆ.
18 ದಿನಗಳಿಂದ ತಂಗಿದ್ದ ಜೋಡಿ:
ವಿವಿಧ ಧರ್ಮಕ್ಕೆ ಸೇರಿದ ಈ ಯುವ ಜೋಡಿಯ ಪ್ರೀತಿಗೆ ಎರಡೂ ಕುಟುಂಬಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಮನೆ ತೊರೆದು ಬಂದಿದ್ದ ಇಬ್ಬರೂ ಲಕ್ನೋದ ಚಿನ್ಹಟ್ ಪ್ರದೇಶದಲ್ಲಿರುವ ‘ರೆಡ್ ಬಿಲ್ಡಿಂಗ್’ ಅತಿಥಿಗೃಹದ ಕೊಠಡಿ ಸಂಖ್ಯೆ 101ರಲ್ಲಿ ಕಳೆದ 18 ದಿನಗಳಿಂದ (ಆಗಸ್ಟ್ 23 ರಿಂದ) ನೆಲೆಸಿದ್ದರು.
ಬುಧವಾರ ಇಡೀ ದಿನ ಇಬ್ಬರೂ ಕೊಠಡಿಯಿಂದ ಹೊರಬಂದಿರಲಿಲ್ಲ. ರಾತ್ರಿ 8 ಗಂಟೆಯ ಸುಮಾರಿಗೆ ಸಿಬ್ಬಂದಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅನುಮಾನಗೊಂಡ ಸಿಬ್ಬಂದಿ ಕಿಟಕಿಯ ಮೂಲಕ ಇಣುಕಿ ನೋಡಿದಾಗ, ಇಬ್ಬರೂ ಸೀರೆಯ ಸಹಾಯದಿಂದ ಫ್ಯಾನಿನ ಹುಕ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಮರಣಪತ್ರ ಮತ್ತು ಮದುವೆ ಪ್ರಮಾಣಪತ್ರ ಲಭ್ಯ:
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಚಿನ್ಹಟ್ ಠಾಣೆ ಪೊಲೀಸರು ಪರ್ಯಾಯ ಕೀಲಿಯಿಂದ ಬಾಗಿಲು ತೆರೆದು ಮೃತದೇಹಗಳನ್ನು ಕೆಳಕ್ಕಿಳಿಸಿ, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ರವಾನಿಸಿದರು. ಸ್ಥಳ ಪರಿಶೀಲನೆ ನಡೆಸಿದಾಗ ಕೊಠಡಿಯಲ್ಲಿ ಆರ್ಯ ಸಮಾಜದ ಮದುವೆ ಪ್ರಮಾಣಪತ್ರ ಹಾಗೂ ಇಬ್ಬರೂ ಸಹಿ ಮಾಡಿರುವ ಮರಣಪತ್ರ ಪತ್ತೆಯಾಗಿದೆ.
“ನಾವು ನಮ್ಮ ಸ್ವಂತ ಇಷ್ಟದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸಾವಿನ ನಂತರ ನಮ್ಮ ಕುಟುಂಬದ ಸದಸ್ಯರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು” ಎಂದು ಮರಣಪತ್ರದಲ್ಲಿ ಬರೆಯಲಾಗಿದೆ.
ಅಪಹರಣ ದೂರು ದಾಖಲಾಗಿತ್ತು:
ಆಗಸ್ಟ್ 21 ರಂದು ಯುವಕನು ತನ್ನ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಯುವತಿಯ ತಂದೆ ಹರಪಾಲ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಯುತ್ತಿರುವಂತೆಯೇ ಈ ದುರಂತ ಸಂಭವಿಸಿದೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟು, ಮುಂದಿನ ತನಿಖೆ ಕೈಗೊಂಡಿದ್ದಾರೆ.





Leave a comment