Home ದಾವಣಗೆರೆ ಎಂಥಾ ಕಾಲ ಬಂತಪ್ಪ….! ಅದೃಷ್ಟ ತಂದ ‘ವ್ಯಾಗನ್ ಆರ್’ ಕಾರಿಗೆ ಅದ್ಧೂರಿ ಸಮಾಧಿ: 4 ಲಕ್ಷ ವೆಚ್ಚ, 1,500 ಜನರಿಗೆ ಪ್ರಸಾದ ನೀಡಿದ ಕುಟುಂಬ!
ದಾವಣಗೆರೆನವದೆಹಲಿಬೆಂಗಳೂರು

ಎಂಥಾ ಕಾಲ ಬಂತಪ್ಪ….! ಅದೃಷ್ಟ ತಂದ ‘ವ್ಯಾಗನ್ ಆರ್’ ಕಾರಿಗೆ ಅದ್ಧೂರಿ ಸಮಾಧಿ: 4 ಲಕ್ಷ ವೆಚ್ಚ, 1,500 ಜನರಿಗೆ ಪ್ರಸಾದ ನೀಡಿದ ಕುಟುಂಬ!

Share
ಅದೃಷ್ಟ
Share

ಅಮ್ರೇಲಿಗುಜರಾತ್‌ನ ಅಮ್ರೇಲಿ ಜಿಲ್ಲೆಯ ಲಾಠಿ ತಾಲೂಕಿನ ಪಾಥರ್‌ಸಿಂಗಾ ಗ್ರಾಮದಲ್ಲಿ ಅಪರೂಪದ ಹಾಗೂ ಭಾವುಕ ಘಟನೆಯೊಂದು ಜರುಗಿದೆ. ಸೂರತ್‌ನಲ್ಲಿ ನಿರ್ಮಾಣ ಉದ್ಯಮ ನಡೆಸುತ್ತಿರುವ ರೈತ ಹಾಗೂ ಉದ್ಯಮಿ ಸಂಜಯ್ ಪೊಲಾರಾ ಎಂಬುವರು ತಮ್ಮ ಕುಟುಂಬಕ್ಕೆ ಅಪಾರ ಅದೃಷ್ಟ ತಂದುಕೊಟ್ಟ 12 ವರ್ಷ ಹಳೆಯ ‘ಸುಜುಕಿ ವ್ಯಾಗನ್ ಆರ್’ ಕಾರಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ತಮ್ಮ ಸ್ವಂತ ಜಮೀನಿನಲ್ಲಿ ಸಮಾಧಿ ಮಾಡಿದ್ದಾರೆ.

ಅದ್ದೂರಿ ಅಂತಿಮಯಾತ್ರೆ ಮತ್ತು ಪೂಜಾವಿಧಿಗಳು

ಸುಮಾರು 12 ವರ್ಷಗಳ ಹಿಂದೆ ಖರೀದಿಸಿದ್ದ ಈ ಕಾರು ಬಂದ ನಂತರ ತಮ್ಮ ವ್ಯಾಪಾರ-ವಹಿವಾಟು ವೃದ್ಧಿಸಿತು, ಆರ್ಥಿಕ ಸ್ಥಿತಿ ಸುಧಾರಿಸಿತು ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಯಿತು ಎಂಬುದು ಪೊಲಾರಾ ಕುಟುಂಬದ ಬಲವಾದ ನಂಬಿಕೆ. ಹೀಗಾಗಿ, ಈ ಕಾರನ್ನು ಬೇರೆಯವರಿಗೆ ಮಾರಾಟ ಮಾಡಲು ಅಥವಾ ಗುಜರಿಗೆ ಹಾಕಲು ಇಷ್ಟಪಡದ ಮಾಲೀಕರು, ಅದಕ್ಕೆ ಭಾವಪೂರ್ಣ ಬೀಳ್ಕೊಡುಗೆ ನೀಡಲು ನಿರ್ಧರಿಸಿದರು.

ಕಾರನ್ನು ಚೆಂಡುಹೂವು ಮತ್ತು ಗುಲಾಬಿ ದಳಗಳಿಂದ ಅದ್ಧೂರಿಯಾಗಿ ಶೃಂಗರಿಸಿ, ಮೇಳ-ತಾಳಗಳೊಂದಿಗೆ ಮೆರವಣಿಗೆಯ ಮೂಲಕ ಜಮೀನಿಗೆ ತರಲಾಯಿತು. ಪುರೋಹಿತರ ಮಂತ್ರೋಚ್ಛಾರಣೆಯ ನಡುವೆ ಕಾರಿಗೆ ಕೊನೆಯ ಪೂಜೆ ಸಲ್ಲಿಸಿ, ಹಸಿರು ಬಟ್ಟೆಯಿಂದ ಮುಚ್ಚಲಾಯಿತು.

15 ಅಡಿ ಆಳದ ಸಮಾಧಿ ಮತ್ತು 1,500 ಅತಿಥಿಗಳು

ಜಮೀನಿನಲ್ಲಿ ಕ್ರೇನ್ ಮತ್ತು ಹಿಟಾಚಿ ಯಂತ್ರಗಳ ಸಹಾಯದಿಂದ ಸುಮಾರು 15 ಅಡಿ ಆಳದ ದೊಡ್ಡ ಗುಂಡಿಯನ್ನು ತೋಡಿ, ಇಳಿಜಾರಿನ ಮೂಲಕ ಕಾರನ್ನು ಇಳಿಸಿ ಮಣ್ಣು ಮುಚ್ಚಿ ಸಮಾಧಿ ಮಾಡಲಾಯಿತು. ಈ ವಿಶೇಷ ಅಂತಿಮ ಕಾರ್ಯಕ್ರಮಕ್ಕೆ ಸಾಧು-ಸಂತರು, ಗ್ರಾಮಸ್ಥರು ಮತ್ತು ಬಂಧುಮಿತ್ರರು ಸೇರಿ ಸುಮಾರು 1,500 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಆಗಮಿಸಿದ್ದ ಎಲ್ಲಾ ಅತಿಥಿಗಳಿಗೆ ಅದ್ಧೂರಿ ಮಹಾಪ್ರಸಾದದ (ಊಟದ) ವ್ಯವಸ್ಥೆ ಮಾಡಲಾಗಿತ್ತು. ಈ ಸಂಪೂರ್ಣ ಕಾರ್ಯಕ್ರಮಕ್ಕೆ ಕುಟುಂಬವು ಸುಮಾರು 4 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದೆ.

ಸಮಾಧಿ ಮೇಲೆ ಗಿಡ ನೆಟ್ಟು ನೆನಪು ಶಾಶ್ವತ ಕಾರನ್ನು ಮಣ್ಣಿನಲ್ಲಿ ಮುಚ್ಚಿದ ನಂತರ, ಆ ಸಮಾಧಿಯ ಜಾಗದಲ್ಲಿ ಒಂದು ಸಸಿಯನ್ನು ನೆಡಲಾಗಿದೆ. ಮುಂದಿನ ಪೀಳಿಗೆಗೆ ತಮ್ಮ ಕುಟುಂಬದ ಏಳಿಗೆಗೆ ಕಾರಣವಾದ ಈ ಅದೃಷ್ಟದ ವಾಹನದ ನೆನಪು ಶಾಶ್ವತವಾಗಿ ಉಳಿಯಲಿ ಎಂಬ ಉದ್ದೇಶದಿಂದ ಈ ವಿಶಿಷ್ಟ ಆಚರಣೆ ಮಾಡಿರುವುದಾಗಿ ಸಂಜಯ್ ಪೊಲಾರಾ ತಿಳಿಸಿದ್ದಾರೆ. ಈ ಘಟನೆಯ ವೀಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles