ದಾವಣಗೆರೆ: ಜಿಎಂ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ (ಜಿಎಂಐಪಿಎಸ್ಆರ್) ದಾವಣಗೆರೆ ವತಿಯಿಂದ ವೈಯಾಟ್ರಿಸ್ (ಮೈಲಾನ್ ಲ್ಯಾಬ್ಸ್), ಬೆಂಗಳೂರು ಸಂಸ್ಥೆಯ ಸಹಯೋಗದಲ್ಲಿ ಸೆಪ್ಟೆಂಬರ್ 10, 2026ರ ಗುರುವಾರ ಬೆಳಿಗ್ಗೆ 9.15ಕ್ಕೆ ಜಿಎಂ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿರುವ ಜಿಎಂಐಪಿಎಸ್ಆರ್ ಆವರಣದಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಫಾರ್ಮಸಿ ವಿದ್ಯಾರ್ಥಿಗಳಿಗೆ ಔಷಧೀಯ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಲು ಇದು ಉತ್ತಮ ಅವಕಾಶವಾಗಿದೆ. ಸುಮಾರು ಐದು ವಿವಿಧ ಕಾಲೇಜುಗಳಿಂದ 150 ಬಿ. ಫಾರ್ಮ್ 8ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಎಂಐಪಿಎಸ್ಆರ್ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಲಕಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈಯಾಟ್ರಿಸ್ ಸಂಸ್ಥೆಯ ವತಿಯಿಂದ ಗುಣಮಟ್ಟದ ಭರವಸೆ, ತಾಂತ್ರಿಕ ಕಾರ್ಯಾಚರಣೆ ಹಾಗೂ ಉತ್ಪಾದನಾ ವಿಭಾಗಗಳಲ್ಲಿ ತರಬೇತಿ ಆಧಾರಿತ ಉದ್ಯೋಗಾವಕಾಶಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಔಷಧೀಯ ಉದ್ಯಮದ ಕಾರ್ಯವೈಖರಿ, ವೃತ್ತಿಪರ ಕೌಶಲ್ಯಗಳು, ಉದ್ಯಮದ ನಿರೀಕ್ಷೆಗಳು ಹಾಗೂ ಭವಿಷ್ಯದ ವೃತ್ತಿ ಅವಕಾಶಗಳ ಕುರಿತು ನೇರ ಮಾಹಿತಿ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಪೂಲ್ ಕ್ಯಾಂಪಸ್ ನೇಮಕಾತಿಯ ಪ್ರಮುಖ ವಿಶೇಷತೆಯೆಂದರೆ, ಇತರೆ ಕಾಲೇಜುಗಳ ಅರ್ಹ ಬಿ. ಫಾರ್ಮ್ ವಿದ್ಯಾರ್ಥಿಗಳೂ ಸಹ ಈ ನೇಮಕಾತಿಯಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿಗೆ ಒಂದು ದಿನ ಮುಂಚಿತವಾಗಿ ನೋಂದಣಿ ಮಾಡಿಕೊಂಡು ಭಾಗವಹಿಸಬಹುದು ಎಂದು ಹೇಳಿದ್ದಾರೆ.
ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ವೈಯಾಟ್ರಿಸ್ ಸಂಸ್ಥೆಯ ಪರವಾಗಿ ಕೀರ್ತಿ ಕೈತ್ವಾಸ್ – ಮಾನವ ಸಂಪನ್ಮೂಲ ಪ್ರತಿನಿಧಿ, ವೈಯಾಟ್ರಿಸ್, ಬಾಲಕೃಷ್ಣ ಭಟ್ಟೆ – ಮಾನವ ಸಂಪನ್ಮೂಲ ಪ್ರತಿನಿಧಿ, ವೈಯಾಟ್ರಿಸ್ ಇವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಔಷಧೀಯ ಉದ್ಯಮದಲ್ಲಿನ ಉದ್ಯೋಗಾವಕಾಶಗಳು, ತರಬೇತಿ ಅವಕಾಶಗಳು, ಉದ್ಯಮದ ಅವಶ್ಯಕತೆಗಳು ಹಾಗೂ ವೃತ್ತಿಪರ ಕೌಶಲ್ಯಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದಿದ್ದಾರೆ.





Leave a comment