ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಮುಸ್ತಫಾ ಮಸೀದಿಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದೆ.
ದೆಹಲಿ ರಸ್ತೆಯಲ್ಲಿರುವ ತೀರ್ಥಂಕರ ಮಹಾವೀರ್ ವಿಶ್ವವಿದ್ಯಾಲಯದ ಎದುರು ಇರುವ ಈ ಮಸೀದಿಯು ಸುಮಾರು 300 ಚದರ ಮೀಟರ್ ಪ್ರದೇಶದಲ್ಲಿದೆ. ಮಸೀದಿಯ ನಕ್ಷೆ ಅಧಿಕೃತವಾಗಿ ಅನುಮೋದನೆಗೊಂಡಿಲ್ಲ ಎಂಬ ದೂರಿನ ಆಧಾರದ ಮೇಲೆ ಮೊರಾದಾಬಾದ್ ಅಭಿವೃದ್ಧಿ ಪ್ರಾಧಿಕಾರ ಮಸೀದಿ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.
ಪ್ರಾಧಿಕಾರದ ನಿಲುವು:
ನಿರ್ಮಾಣ ಕಾರ್ಯಕ್ಕೆ ಅನುಮೋದನೆ ಪಡೆದಿರುವುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಎಂಡಿಎ ಸೂಚಿಸಿದೆ. ಅಲ್ಲದೆ, ಈ ಪ್ರದೇಶದಲ್ಲಿ ರಸ್ತೆ ಮತ್ತು ಸಂಚಾರಕ್ಕೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆಯೂ ಪ್ರಾಧಿಕಾರವು ಕಳಳವಳ ವ್ಯಕ್ತಪಡಿಸಿದೆ. ಎಂಡಿಎ ಉಪಾಧ್ಯಕ್ಷ ಅನುಭವ್ ಸಿಂಗ್ ಮಾತನಾಡಿ, “ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ಮಸೀದಿ ಆಡಳಿತ ಮಂಡಳಿಯ ಪ್ರತಿಕ್ರಿಯೆ:
ಮಸೀದಿಯು ಹೊಸದಾಗಿ ನಿರ್ಮಿಸಿದ್ದಲ್ಲ ಎಂದು ಇಮಾಮ್ ಮೊಹಮ್ಮದ್ ಶಾನ್ ಅಝಾರಿ ಸ್ಪಷ್ಟಪಡಿಸಿದ್ದಾರೆ. ಇದು ದಶಕಗಳಷ್ಟು ಹಳೆಯದಾಗಿದ್ದು, ತಮ್ಮ ಪೂರ್ವಿಕರ ಕಾಲದಿಂದಲೂ ನಿಯಮಿತವಾಗಿ ಪ್ರಾರ್ಥನೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ದೆಹಲಿ ರಸ್ತೆಯಲ್ಲಿ ಸಂಚಾರಕ್ಕೆ ಇದರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಅವರು ವಾದ ತಳ್ಳಿಹಾಕಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿಯೇ ನೋಟಿಸ್‌ಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ಮಸೀದಿ ವ್ಯವಸ್ಥಾಪಕರು (ಮುತವಲ್ಲಿ) ತಿಳಿಸಿದ್ದಾರೆ.





Leave a comment