ರಾಯ್‌ಪುರ: ಖಾಸಗಿ ಧಾರ್ಮಿಕ ಸಂಸ್ಥೆಗಳು ಅಥವಾ ಶರಿಯಾ ಕೋರ್ಟ್‌ಗಳಿಗೆ ಯಾವುದೇ ವಿವಾಹವನ್ನು ಕಾನೂನುಬದ್ಧವಾಗಿ ವಿಸರ್ಜಿಸುವ ಅಥವಾ ವಿಚ್ಛೇದನ ನೀಡುವ ಅಧಿಕಾರವಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಸ್ಪಷ್ಟಪಡಿಸಿದೆ. ರಾಯ್‌ಪುರದ ಶರಿಯಾ ಕೋರ್ಟ್ ನೀಡಿದ್ದ ವಿಚ್ಛೇದನ ಆದೇಶವನ್ನು ಹೈಕೋರ್ಟ್ ಕಾನೂನುಬಾಹಿರ ಹಾಗೂ ಶೂನ್ಯ ಎಂದು ಘೋಷಿಸಿದೆ.
ಪ್ರಕರಣದ ಹಿನ್ನೆಲೆ: ರಾಯ್‌ಪುರದ ನಿವಾಸಿ ನಿರೋಷ್ ಅಬ್ಬಾಸಿ (38) ಅವರ ಮೊದಲ ಪತಿ 2015ರಲ್ಲಿ ನಿಧನರಾಗಿದ್ದರು. ಬಳಿಕ 2022ರಲ್ಲಿ ಅವರು ಮೊಹಮ್ಮದ್ ಆಬಿದ್ ಖಾನ್ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಕುಟುಂಬದಲ್ಲಿ ಮಕ್ಕಳ ಹೊಂದಾಣಿಕೆ ಹಾಗೂ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ದಂಪತಿಗಳ ನಡುವೆ ಕಲಹ ಉಂಟಾಗಿತ್ತು. ವಿವಾದ ಹೆಚ್ಚಾದ ಹಿನ್ನೆಲೆಯಲ್ಲಿ ಪತಿ ಮುಮ್ಮೂರು ತ್ರಿವಳಿ ತಲಾಕ್ ನೀಡಿದ್ದು, ಪತ್ನಿ ಹಾಗೂ ಆಕೆಯ ಕುಟುಂಬದವರು ತನ್ನ ಮೇಲೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದರು.
ಈ ವಿವಾದದ ಮಧ್ಯೆ, ರಾಯ್‌ಪುರದ ಶರಿಯಾ ಕೋರ್ಟ್ (ದಾರುಲ್ ಕಜಾ) 2022ರ ಜನವರಿ 18ರಂದು ಆದೇಶವೊಂದನ್ನು ಹೊರಡಿಸಿ, ನಿರೋಷ್ ಅಬ್ಬಾಸಿ ಅವರಿಗೆ ಪತಿಯಿಂದ ವಿಚ್ಛೇದನ ದೊರೆತಿದೆ ಎಂದು ಘೋಷಿಸಿತ್ತು.
ಹೈಕೋರ್ಟ್ ಮಹತ್ವದ ತೀರ್ಪು: ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತೇಂದ್ರ ಕಿಶೋರ್ ಪ್ರಸಾದ್ ನೇತೃತ್ವದ ಪೀಠವು ಮಹತ್ವದ ತೀರ್ಪು ನೀಡಿದೆ. ದಾರುಲ್ ಕಜಾ ಅಥವಾ ಶರಿಯಾ ಕೋರ್ಟ್‌ಗಳಂತಹ ಖಾಸಗಿ ಧಾರ್ಮಿಕ ಸಂಸ್ಥೆಗಳು ಕಾನೂನುಬದ್ಧವಾಗಿ ಸ್ಥಾಪಿಸಲ್ಪಟ್ಟ ನ್ಯಾಯಾಲಯಗಳಲ್ಲ ಎಂದು ನ್ಯಾಯಾಲಯ ಖಡಕ್ ಆಗಿ ನುಡಿದಿದೆ.
ಇಂತಹ ಸಂಸ್ಥೆಗಳು ಧಾರ್ಮಿಕ ಅಭಿಪ್ರಾಯಗಳು ಅಥವಾ ಫತ್ವಾಗಳನ್ನು ನೀಡಬಹುದೇ ಹೊರತು, ಯಾವುದೇ ವ್ಯಕ್ತಿಯ ವೈವಾಹಿಕ ಹಕ್ಕುಗಳನ್ನು ಅಥವಾ ಕಾನೂನುಬದ್ಧ ಸ್ಥಾನಮಾನವನ್ನು ಬದಲಾಯಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ವಿವಾಹ ವಿಚ್ಛೇದನ ಅಥವಾ ಕಾನೂನುಬದ್ಧ ಹಕ್ಕುಗಳ ನಿರ್ಣಯವನ್ನು ಕೇವಲ ಸಮರ್ಥ ನ್ಯಾಯಾಲಯ ಅಥವಾ ಶಾಸನಬದ್ಧ ಪ್ರಕ್ರಿಯೆಗಳ ಮೂಲಕ ಮಾತ್ರ ನಡೆಸಲು ಸಾಧ್ಯ ಎಂದು ನ್ಯಾಯಪೀಠ ತಿಳಿಸಿದೆ.
Leave a comment