ಆಗ್ರಾ (ಉತ್ತರ ಪ್ರದೇಶ): ರಸ್ತೆಯ ದುರಾವಸ್ಥೆ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವವೊಂದು ಬಲಿಯಾದ ಅತ್ಯಂತ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಬಾಹ್ ತಾಲೂಕಿನ ಗಡ್ವಾರ್ ಗ್ರಾಮದಲ್ಲಿ ವರದಿಯಾಗಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್, ಹಳೆಯ ಹಾಳಾದ ರಸ್ತೆಯ ಗುಂಡಿಯಲ್ಲಿ ಬಿದ್ದು ಸುಮಾರು ಎರಡು ಗಂಟೆಗಳ ಕಾಲ ಸಿಲುಕಿಕೊಂಡಿದ್ದರಿಂದ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ನವಜಾತ ಶಿಶು ಗರ್ಭದಲ್ಲೇ ಮೃತಪಟ್ಟಿದೆ.
ಟ್ರ್ಯಾಕ್ಟರ್‌ಗೆ ಕಟ್ಟಿ ಆಂಬ್ಯುಲೆನ್ಸ್ ಎಳೆದ ಗ್ರಾಮಸ್ಥರು
ಸೆಪ್ಟೆಂಬರ್ 2 ರ ತಡರಾತ್ರಿ ಪ್ರದೀಪ್ ಸಿಂಗ್ (ಪ್ರವೀಣ್) ಅವರ ಪತ್ನಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಕುಟುಂಬಸ್ಥರು ಸರ್ಕಾರಿ ತುರ್ತು ಆಂಬ್ಯುಲೆನ್ಸ್‌ಗೆ (108) ಕರೆ ಮಾಡಿದ್ದರು. ಆದರೆ, ಗ್ರಾಮದಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಮಳೆಯಿಂದಾಗಿ ತೀವ್ರವಾಗಿ ಹಾಳಾಗಿದ್ದು, ರಸ್ತೆಯಲ್ಲಿದ್ದ ದೊಡ್ಡ ಗುಂಡಿಯಲ್ಲಿ ಆಂಬ್ಯುಲೆನ್ಸ್ ಸಿಲುಕಿಕೊಂಡಿತು.
ವಾಹನವನ್ನು ಗುಂಡಿಯಿಂದ ಹೊರತೆಗೆಯಲು ಚಾಲಕ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಗ್ರಾಮಸ್ಥರು ಟ್ರ್ಯಾಕ್ಟರ್ ಒಂದನ್ನು ತಂದು, ಹಗ್ಗದಿಂದ ಆಂಬ್ಯುಲೆನ್ಸ್‌ಗೆ ಕಟ್ಟಿ ಕಷ್ಟಪಟ್ಟು ಹೊರಗೆ ಎಳೆದರು. ಈ ಪ್ರಕ್ರಿಯೆಯಲ್ಲಿ ಸುಮಾರು 2 ಗಂಟೆಗಳ ಅಮೂಲ್ಯ ಸಮಯ ವ್ಯರ್ಥವಾಯಿತು.
ಚಿಕಿತ್ಸೆ ತಡವಾಗಿ ಮಗು ಸಾವು
ಕೊನೆಗೆ ಪರ್ಯಾಯ ಮಾರ್ಗದ ಮೂಲಕ ಮಹಿಳೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಸಮಯ ಮೀರಿಹೋಗಿತ್ತು. ಆಸ್ಪತ್ರೆಯ ವೈದ್ಯರು ಪರೀಕ್ಷಿಸಿದಾಗ ಚಿಕಿತ್ಸೆಯಲ್ಲಿ ತೀವ್ರ ವಿಳಂಬವಾದ ಕಾರಣ ನವಜಾತ ಹೆಣ್ಣು ಮಗು ಗರ್ಭದಲ್ಲೇ ಉಸಿರುಚೆಲ್ಲಿರುವುದು ದೃಢಪಟ್ಟಿದೆ.
ಆಡಳಿತ ವಿರುದ್ಧ ಸಾರ್ವಜನಿಕರ ಆಕ್ರೋಶ, ತನಿಖೆ
ರಸ್ತೆಯ ಕಳಪೆ ಸ್ಥಿತಿಯ ಕುರಿತು ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆಡಳಿತದ ಪ್ರತಿಕ್ರಿಯೆ: ಘಟನೆ ಕುರಿತು ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿ ವಿನೋದ್ ಕುಮಾರ್, “ತೆಹಸೀಲ್ ದಿವಸ್‌ನ ದೂರಿನನ್ವಯ ಲೋಕೋಪಯೋಗಿ ಇಲಾಖೆಯಿಂದ ವರದಿ ಕೇಳಲಾಗಿದೆ. ತನಿಖೆಯ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ರಾಜಕೀಯ ಕೆಸರೆರಚಾಟ: ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿ ಸರ್ಕಾರದ ಭ್ರಷ್ಟಾಚಾರವೇ ಮಗುವಿನ ಸಾವಿಗೆ ಕಾರಣ ಎಂದು ಕಿಡಿಕಾರಿದ್ದಾರೆ.





Leave a comment