ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕರಾದ ಮೋಹನ್ ಭಾಗವತ್ ಅವರು ತಮ್ಮ ಮೂರು ದೇಶಗಳ ವಿದೇಶಿ ಪ್ರವಾಸದ ಅಂತಿಮ ಘಟ್ಟವಾಗಿ ಲಂಡನ್‌ನಲ್ಲಿ ನಡೆದ ‘ಸೆಲೆಬ್ರೆಷನ್ ಆಫ್ ವನ್ಸ್‌ನೆಸ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹತ್ವದ ಮಾತನಾಡಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರು ತಮ್ಮ ಬ್ರಿಟನ್ ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾಡಿದ ಭಾಷಣವು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಲಂಡನ್‌ನಲ್ಲಿ ಜರುಗಿದ ಐತಿಹಾಸಿಕ ಕಾರ್ಯಕ್ರಮದಲ್ಲಿ ಅವರು ಜಾಗತಿಕ ಶಾಂತಿ, ಅಸ್ತಿತ್ವದ ಏಕತೆ ಮತ್ತು ಪ್ರಾದೇಶಿಕ ನಿಷ್ಠೆಯ ಕುರಿತು ಮಾರ್ಮಿಕವಾಗಿ ಮಾತನಾಡಿದರು.
ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಾವು ಕೆಲಸ ಮಾಡುವ, ಬದುಕುವ ‘ಕರ್ಮ ಭೂಮಿ’ಗೆ ಸಂಪೂರ್ಣವಾಗಿ ನಿಷ್ಠರಾಗಿರಬೇಕು ಎಂದು ಅವರು ಮತ್ತೊಮ್ಮೆ ಒತ್ತಿ ಹೇಳಿದರು. ‘ಜನ್ಮ ಭೂಮಿ’ ಅಥವಾ ತವರು ನಮಗೆ ಮೌಲ್ಯಗಳನ್ನು ನೀಡಿದರೆ, ನಾವು ಕರ್ಮ ಭೂಮಿಯ ಕಾನೂನು ಮತ್ತು ನಿಯಮಗಳಿಗೆ ಬದ್ಧರಾಗಿರಬೇಕು ಎಂದು ತಿಳಿಸಿದರು.
ಬ್ರಿಟಿಷ್ ಹಿಂದೂಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಸಂದರ್ಭ ಬಂದರೂ ಬ್ರಿಟನ್‌ನಲ್ಲಿ ನೆಲೆಸಿರುವವರು ಆ ದೇಶದ ಜೊತೆ ನಿಲ್ಲಬೇಕು ಎಂದು ಸ್ಪಷ್ಟಪಡಿಸಿದರು.
ಹಿಂದೂ ಚಿಂತನೆ ಮತ್ತು ವೈವಿಧ್ಯತೆಯ ಕುರಿತು ಮಾತನಾಡಿದ ಭಾಗವತ್, ಪ್ರಕೃತಿಯಲ್ಲಿ ವೈವಿಧ್ಯತೆ ಸಹಜವಾಗಿದ್ದು, ಅದನ್ನು ಎಲ್ಲರೂ “ಗೌರವಿಸಬೇಕು ಮತ್ತು ಸ್ವೀಕರಿಸಬೇಕು” ಎಂದರು. ಯುವಜನತೆಯ ಬಗ್ಗೆ ತಮಗೆ ಸಂಪೂರ್ಣ ವಿಶ್ವಾಸವಿದೆಯೆಂದು ಹೇಳಿದ ಅವರು, ಯುವಕರಿಗೆ ನಿರ್ದಿಷ್ಟ ವಿಧಾನಗಳನ್ನು ಹೇರುವ ಬದಲು ಅವರಿಗೆ ಸ್ಪಷ್ಟವಾದ ಗುರಿಯನ್ನು (Goal) ನೀಡಬೇಕು ಎಂದರು.
ಕರ್ಮ ಭೂಮಿಯೇ ಪ್ರಥಮ ನಿಷ್ಠೆ:
ಯಾವ ದೇಶದಲ್ಲಿ ವ್ಯಕ್ತಿಯು ಬದುಕುತ್ತಾನೋ, ದುಡಿಯುತ್ತಾನೋ ಆ ದೇಶಕ್ಕೆ ಪ್ರಾಮಾಣಿಕವಾಗಿರಬೇಕು ಎಂಬುದೇ ಭಾರತೀಯ ಸನಾತನ ಚಿಂತನೆಯ ಮೂಲ ಮಂತ್ರ ಎಂದು ಅವರು ಪ್ರತಿಪಾದಿಸಿದರು. ಜನ್ಮ ಭೂಮಿಯು ಸಂಸ್ಕಾರವನ್ನು ನೀಡಿದರೆ, ಕರ್ಮ ಭೂಮಿಯು ಕರ್ತವ್ಯದ ಪಾಠ ಕಲಿಸುತ್ತದೆ. ಆದ್ದರಿಂದ ಅಲ್ಲಿನ ಸಮಾಜದೊಂದಿಗೆ ಬೆರೆತು, ಆ ದೇಶದ ಪ್ರಗತಿಗೆ ಶ್ರಮಿಸುವುದು ಪ್ರತಿಯೊಬ್ಬರ ನೈತಿಕ ಜವಾಬ್ದಾರಿಯಾಗಿದೆ ಎಂದು ವಿವರಿಸಿದರು.
ವೈವಿಧ್ಯತೆಯೇ ಸೌಂದರ್ಯ:
ಸಮಾಜದಲ್ಲಿರುವ ಭಿನ್ನತೆಗಳು ಅಥವಾ ವೈವಿಧ್ಯತೆಗಳು ಸಂಘರ್ಷಕ್ಕೆ ಕಾರಣವಾಗಬಾರದು. ಬದಲಿಗೆ ಅವು ಅಸ್ತಿತ್ವದ ಏಕತೆಯ ಅಲಂಕಾರಗಳಾಗಿವೆ ಎಂದು ಬಣ್ಣಿಸಿದರು. ಬ್ರಿಟನ್‌ನಲ್ಲಿರುವ ಹಿಂದೂಗಳು ಅಲ್ಲಿನ ಸಂಸ್ಕೃತಿಗೆ ಅನುಗುಣವಾಗಿ ಬದುಕಬೇಕು ಮತ್ತು ಯಾವುದೇ ಸಂದರ್ಭ ಬಂದರೂ ತಾವು ವಾಸಿಸುವ ದೇಶದ ಹಿತಾಸಕ್ತಿಗೆ ಬದ್ಧರಾಗಿರಬೇಕು ಎಂದು ಕರೆ ನೀಡಿದರು.





Leave a comment