ಬೆಂಗಳೂರು: ಚುನಾವಣಾ ರಾಜಕೀಯದಿಂದ ಮಾತ್ರ ನಾನು ಹಿಂದೆ ಸರಿದಿದ್ದೇನೆ. ಯಾಕೆಂದರೆ ನಮ್ಮ ಚುನಾವಣಾ ವ್ಯವಸ್ಥೆಯು ಬಹಳ ದುಬಾರಿಯಾಗಿದೆ. ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕು. ನನಗೆ ವಯಸ್ಸಾಗಿದೆ, ಆ ಕಾರಣದಿಂದ ನಾನು ಚುನಾವಣೆಯಲ್ಲಿ ನಿಲ್ಲುವುದಿಲ್ಲ ಜೊತೆಗೆ ಚುನಾವಣಾ ವ್ಯವಸ್ಥೆ ಬಹಳ ಹದಗೆಟ್ಟಿದೆ. ಚುನಾವಣೆಯಲ್ಲಿ ಹಣ ಹಾಕಿ ಗೆಲ್ಲಬೇಕಾದರೆ ಅದಕ್ಕಾಗಿ ಕೆಲವು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆ ಕಾರಣದಿಂದ ಹೊರತು ಬೇರೆ ಯಾವುದೇ ಕಾರಣದಿಂದ ನಾನು ಹಿಂದೆ ಸರಿದಿರುವುದಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ರಜತ ಮಹೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಿಮಗೆ ನ್ಯಾಯ ಸಿಗುವವರೆಗೆ, ಸಮಾನ ಅವಕಾಶ ಸಿಗುವವರೆಗೆ, ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗುವವರೆಗೆ ನಿಮ್ಮೊಂದಿಗೆ ಇದ್ದು, ಹೋರಾಟ ಮಾಡುತ್ತೇನೆ. ಹೀಗಾಗಿ ನೀವ್ಯಾರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಇದು ಒಕ್ಕೂಟದ ರಜತ ಮಹೋತ್ಸವ. 2001ರಲ್ಲಿ ಶ್ರೀನಿವಾಸ್ ಎಂಬ ಬೆಸ್ತ ಸಮುದಾಯಕ್ಕೆ ಸೇರಿದ ವ್ಯಕ್ತಿ ಇದರ ಸಂಸ್ಥಾಪಕರಾಗಿದ್ದರು. ಈಗ ರಾಮಚಂದ್ರಪ್ಪನವರು ಅಧ್ಯಕ್ಷರಾಗಿದ್ದಾರೆ. ಸ್ವಾತಂತ್ರ್ಯ ಬಂದು 79 ವರ್ಷಗಳಾಯಿತು. ಸಂವಿಧಾನ ಬಂದು 76 ವರ್ಷಗಳಾಯಿತು. ಆದರೆ ಇನ್ನೂ ಎಲ್ಲರಿಗೂ ಸಮಾನ ಅವಕಾಶ ದೊರಕಿಲ್ಲ, ಜೊತೆಗೆ ಸಮ ಸಮಾಜ ನಿರ್ಮಾಣ ಆಗಿಲ್ಲ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ನಿಮ್ಮ ಹೋರಾಟ ಇರಲೇಬೇಕು ಎಂದು ತಿಳಿಸಿದರು.
ಸಾವಿರಾರು ವರ್ಷಗಳಿಂದ ಮನುಸ್ಮೃತಿ ಜಾರಿಯಲ್ಲಿತ್ತು. ಅದು ಅಲಿಖಿತ ಸಂವಿಧಾನ. ಅದರ ಪ್ರಕಾರವೇ ಜಾತಿಗಳನ್ನು ಒಡೆದು, ಶ್ರೇಣೀಕೃತ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ಪಟ್ಟಭದ್ರರು ತಮ್ಮ ಬೆಳೆಕಾಳು ಬೇಯಿಸುವ ಕೆಲಸ ಮಾಡಿದ್ದಾರೆ. ಅದಕ್ಕೆ ಅನುಗುಣವಾಗಿ ಇಂದು ಅಸಮಾನತೆ ನಿರ್ಮಾಣವಾಗಿದೆ. ಇಷ್ಟು ವರ್ಷಗಳಾಗಿದ್ದರೂ ಇನ್ನೂ ಕೂಡ ಅಸಮಾನತೆ ಹೋಗಿಲ್ಲ. ಈ ದೇಶದಲ್ಲಿ ಒಂದು ದಿನ ಸಮ ಸಮಾಜ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದರು.





Leave a comment